alex Certify ರಾಜಕೀಯ ಮರೆತು ರಾಜ್ಯದ ಪರ ಎಲ್ಲರೂ ಒಂದಾಗಿ: ಸಂಸದರಿಗೆ ಸಿಎಂ ಬೇಡಿಕೆ ಪಟ್ಟಿ ಸಲ್ಲಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಕೀಯ ಮರೆತು ರಾಜ್ಯದ ಪರ ಎಲ್ಲರೂ ಒಂದಾಗಿ: ಸಂಸದರಿಗೆ ಸಿಎಂ ಬೇಡಿಕೆ ಪಟ್ಟಿ ಸಲ್ಲಿಕೆ

ನವದೆಹಲಿ: ರಾಜಕೀಯ ಮರೆತು ಸಂಸತ್ ನಲ್ಲಿ ರಾಜ್ಯದ ಅಭಿವೃದ್ಧಿ ಪರ ಎಲ್ಲರೂ ಕೂಡಿ ಧ್ವನಿ ಎತ್ತಬೇಕು ಎಂದು ರಾಜ್ಯದ ಸಂಸದರಿಗೆ ಸಿಎಂ ಸಿದ್ದರಾಮಯ್ಯ ಬೇಡಿಕೆ ಪಟ್ಟಿ ಸಲ್ಲಿಸಿದ್ದಾರೆ.

ದೆಹಲಿಯ ಖಾಸಗಿ ಹೋಟೆಲ್ ನಲ್ಲಿ ರಾಜ್ಯದ ನೂತನ ಸಂಸದರೊಂದಿಗೆ ಸಭೆ ನಡೆಸಿದ ಸಿಎಂ, ರಾಜ್ಯದ ಹಿತ ದೃಷ್ಟಿಯಿಂದ ಸಭೆ ಸೇರಿದ್ದು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಮೇಕೆದಾಟು, ಭದ್ರಾ ಯೋಜನೆ ಸೇರಿ ರಾಜ್ಯದ ಅಭಿವೃದ್ಧಿಗೆ ಸಂಸದರೆಲ್ಲರೂ ಕೇಂದ್ರದಲ್ಲಿ ಏಕ ಧ್ವನಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ

ರಾಜ್ಯದ ನೆಲ, ಜಲ, ಸಂಸ್ಕೃತಿ, ಸಂಪನ್ಮೂಲದ ಅಭಿವೃದ್ಧಿಗಾಗಿ ರಾಜ್ಯದ ಸಂಸದರೆಲ್ಲರೂ ಒಕ್ಕೊರಲಿನಿಂದ ಒಂದೇ ಧ್ವನಿಯಲ್ಲಿ ಪ್ರಯತ್ನಿಸುವ ಅಗತ್ಯವಿದೆ. ಇದಕ್ಕಾಗಿ ಇಂದು ಸೌಹಾರ್ದಯುತ ಸಭೆ ಆಯೋಜಿಸಲಾಗಿದೆ. ಕರುನಾಡು ಮತ್ತು ಕನ್ನಡಿಗರ ಹಿತಕ್ಕಾಗಿ ತಮ್ಮೆಲ್ಲರ ಸಹಕಾರ ಇರಲಿ ಎಂದರು.

ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಅಗತ್ಯವಿದೆ. ಭದ್ರಾ ಯೋಜನೆ ಬಗ್ಗೆಯೂ ಪ್ರಯತ್ನ ಮುಂದುವರೆಸಬೇಕಾಗಿದೆ. ಕೇಂದ್ರದ ಬಜೆಟ್ ನಲ್ಲೇ ಅನುದಾನ ಘೋಷಣೆ ಮಾಡಿ ಒಂದು ವರ್ಷ ಕಳೆದಿದೆ. ಆ ಹಣವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊಡಿಸಬೇಕು ಎಂದು ಅವರಲ್ಲಿ ಮನವಿ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕದ ರಾಯಚೂರಿಗೆ ಏಮ್ಸ್ ನೀಡಲು ಮನವಿ ಸಲ್ಲಿಸಿದ್ದೇವೆ. ಇದರ ಈಡೇರಿಕೆ ಅಗತ್ಯವಿದೆ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕ ಹಿಂದುಳಿದಿದೆ. ಏಮ್ಸ್ ಬಂದರೆ ಅಭಿವೃದ್ಧಿ ಸಾಧ್ಯ.

18,172 ಕೋಟಿ ರೂ. ಬರ ಪರಿಹಾರ ಕೇಳಿದ್ದೆವು. ಪೂರ್ತಿ ಬಂದಿಲ್ಲ, ಇದಕ್ಕಾಗಿ ನಿಮ್ಮೆಲ್ಲರ ಪ್ರಯತ್ನ ಅಗತ್ಯವಿದೆ.

ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳ ಅಭಿವೃದ್ಧಿಗಾಗಿ ಉಡಾನ್ ಯೋಜನೆಯಲ್ಲಿ ಸಲ್ಲಿಸಿರುವ ಪ್ರಸ್ತಾವನೆ ನಾಗರೀಕ ವಿಮಾನಯಾನ ಇಲಾಖೆಯಲ್ಲಿ ಬಾಕಿ ಇದೆ. ಇದರ ಈಡೇರಿಕೆಗೆ ತಾವು ಪ್ರಯತ್ನಿಸಬೇಕು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು Air cargo complex ಆಗಿ ಪರಿಗಣಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದರಿಂದ ರಫ್ತು ಹೆಚ್ಚಾಗಿ ಆರ್ಥಿಕ ಚಟುವಟಿಕೆ ವೇಗಗೊಳ್ಳುತ್ತದೆ.

ಮೈಸೂರು ಅಥವಾ ಹಾಸನಕ್ಕೆ ಮತ್ತೊಂದು IIT ಬೇಕು ಎನ್ನುವ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದೇವೆ. ಇದು ಈಡೇರಿಸಬೇಕಾಗಿದೆ.

ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಮನವಿ ಮಾಡಿದ್ದೇವೆ. ಇದನ್ನು ಕೂಡಲೇ ಅಂಗೀಕರಿಸಿ ಪಶ್ಚಿಮ‌ಘಟ್ಟದ ಜನರಿಗೆ ನೆಮ್ಮದಿ ಒದಗಿಸಬೇಕು.

ರಾಜ್ಯ ರೈಲ್ವೇ ಸಂಪರ್ಕದಲ್ಲಿ ಹಿಂದುಳಿದಿದೆ. ಆದ್ದರಿಂದ ಆದ್ಯತೆ ಮೇಲೆ ರಾಜ್ಯಕ್ಕೆ ಹೆಚ್ಚು ಅನುದಾನ ಒದಗಿಸಿ ರೈಲ್ವೇ ಸಂಪರ್ಕ ಹೆಚ್ಚಿಸಲು ಆದ್ಯತೆ ಮೇಲೆ ಹೆಚ್ಚಿನ ಅನುದಾನ ನೀಡಬೇಕು ಎಂದು ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಲ್ಲಿ ಮನವಿ ಮಾಡುತ್ತೇನೆ.

ಗ್ರಾಮ ಸಡಕ್ ಯೋಜನೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಿಂದುಳಿದಿದೆ. ಇದನ್ನು ಸರಿದೂಗಿಸಬೇಕಾಗಿದೆ.

15ನೇ ಹಣಕಾಸು ಆಯೋಗದಲ್ಲಿ ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು 16ನೇ ಆಯೋಗದ ಮುಂದೆ ಪ್ರಬಲವಾಗಿ ವಾದ ಮಂಡಿಸಬೇಕಾಗಿದೆ.

ಕಳಸಾ ಬಂಡೂರಿ ಯೋಜನೆಗೆ ಪರಿಸರ ಒಪ್ಪಿಗೆ ಅಗತ್ಯವಿದೆ. ಇದು ಬಾಕಿ ಇರುವುದರಿಂದ ಕೆಲಸ ಶುರು ಮಾಡಲು ಸಾಧ್ಯವಾಗಿಲ್ಲ.

1971 ಸೆನ್ಸಸ್ ಪರಿಗಣಿಸಿದ್ದರೆ ನಮಗೆ, ನಮ್ಮ ರಾಜ್ಯಕ್ಕೆ ಅನ್ಯಾಯ ಆಗಲು ಸಾಧ್ಯವಾಗುತ್ತಿರಲಿಲ್ಲ. 15ನೇ ಹಣಕಾಸು ಆಯೋಗದಲ್ಲಿ ಶಿಫಾರಸ್ಸು ಮಾಡಿರುವ ಮತ್ತು ಬಜೆಟ್ ನಲ್ಲಿ ಕೇಂದ್ರ ಸರ್ಕಾರವೇ ರಾಜ್ಯಕ್ಕೆ ಘೋಷಿಸಿರುವ ಮೊತ್ತವನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡುತ್ತೇನೆ.

ಇನ್‌ಪುಟ್ ಸಬ್ಸಿಡಿ ಸಮರ್ಪವಾಗಿ ಒದಗಿಸಿಕೊಳ್ಳಬೇಕಾಗಿದೆ.

ಈ ಎಲ್ಲಾ ಬೇಡಿಕೆ, ಯೋಜನೆ, ಪ್ರಸ್ತಾವನೆಗಳ ಮಂಜೂರಾತಿಗೆ ಮನವಿ ಮಾಡುತ್ತೇನೆ. ಈ ಮನವಿಗಾಗಿ ಈ ಸೌಹಾರ್ದ ಸಭೆ ನಡೆಸುತ್ತಿದ್ದೇವೆ. ರಾಜ್ಯದ ಅಭಿವೃದ್ಧಿ ಒಂದೇ ನಮ್ಮ ಗುರಿ. ಇದರಲ್ಲಿ ರಾಜಕೀಯ, ಟೀಕೆ, ಭಾವನಾತ್ಮಕ ಆರೋಪಗಳ ಅಗತ್ಯವಿಲ್ಲ. ರಾಜ್ಯದ ಅಭಿವೃದ್ಧಿಗೆ ಸೌಹಾರ್ದಯುತವಾಗಿ ಪ್ರಯತ್ನಿಸೋಣ ಎನ್ನುವುದಷ್ಟೆ ನನ್ನ ಮನವಿ. ಪಾರ್ಲಿಮೆಂಟಿನ ಒಳಗೆ ಮತ್ತು ಹೊರಗೆ ಈ ಬಗ್ಗೆ ತಾವೆಲ್ಲರೂ ಪಕ್ಷಬೇಧ ಮರೆತು ಧ್ವನಿ ಎತ್ತಬೇಕಾಗಿ ಮನವಿ ಮಾಡುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...