ಕೇಸರಿ ಆಯುರ್ವೇದದ ಮೂಲಿಕೆ. ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಪ್ರಾಚೀನ ಕಾಲದಿಂದಲೂ ಕೇಸರಿಯನ್ನು ಬಳಸಲಾಗುತ್ತಿದೆ. ಕೇಸರಿಯನ್ನು ಮಸಾಲೆಗಳ ರಾಣಿ ಎಂದೇ ಕರೆಯುತ್ತಾರೆ.
ಸಾಮಾನ್ಯವಾಗಿ ಕೇಸರಿಯನ್ನು ಸಿಹಿ ತಿನಿಸುಗಳು ಅಥವಾ ಹಾಲಿಗೆ ಸೇರಿಸಿಕೊಂಡು ಸೇವಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ನೀವು ಕೇಸರಿ ಬೆರೆಸಿದ ನೀರನ್ನು ಕುಡಿಯುವ ಮೂಲಕ ದಿನವನ್ನು ಪ್ರಾರಂಭಿಸಿದರೆ, ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
ಕೇಸರಿಯು ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ಮ್ಯಾಂಗನೀಸ್ ಪೊಟಾಶಿಯಂ, ವಿಟಮಿನ್ ಎ, ವಿಟಮಿನ್ ಸಿ ಮುಂತಾದ ಗುಣಗಳ ಗಣಿಯಾಗಿದೆ. ಪ್ರತಿದಿನ ಬೆಳಗ್ಗೆ ಕೇಸರಿ ನೀರನ್ನು ಕುಡಿದರೆ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. ಅನೇಕ ಗಂಭೀರ ಕಾಯಿಲೆಗಳಿಂದ ಕೇಸರಿ ನಮ್ಮನ್ನು ರಕ್ಷಿಸುತ್ತದೆ. ಕೇಸರಿ ನೀರನ್ನು ಕುಡಿಯುವುದರಿಂದ ದೃಷ್ಟಿಶಕ್ತಿಯೂ ಹೆಚ್ಚುತ್ತದೆ. ಕೇಸರಿ ಪಾನೀಯ ತಯಾರಿಸಲು ಜೇನುತುಪ್ಪ, ದಾಲ್ಚಿನ್ನಿ ಮತ್ತು ಅನೇಕ ಡ್ರೈಫ್ರೂಟ್‌ಗಳು ಬೇಕು. ಹಾಗಾಗಿ ಈ ಪಾನೀಯ ತುಂಬಾನೇ ರುಚಿಕರವಾಗಿರುತ್ತದೆ.
ಕೇಸರಿ ಪಾನೀಯ ತಯಾರಿಸಲು ಕೇಸರಿದಳ, 1 ಇಂಚು ದಾಲ್ಚಿನ್ನಿ, 2 ಏಲಕ್ಕಿ, 4-5 ಬಾದಾಮಿ, ಸ್ವಲ್ಪ ಜೇನುತುಪ್ಪ ಬೇಕು. ಪಾತ್ರೆಯೊಂದರಲ್ಲಿ ಒಂದೂವರೆ ಗ್ಲಾಸ್‌ನಷ್ಟು ನೀರು ಹಾಕಿ ಒಲೆಯ ಮೇಲಿಡಿ. ಅದಕ್ಕೆ ದಾಲ್ಚಿನ್ನಿ, ಕೇಸರಿ ಮತ್ತು ಏಲಕ್ಕಿ, ದಾಲ್ಚಿನ್ನಿ ಸೇರಿಸಿ. ನೀರನ್ನು ಸುಮಾರು ಐದು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ, ನೀರನ್ನು ಸೋಸಿಕೊಳ್ಳಿ. ಸ್ವಲ್ಪ ತಣ್ಣಗಾದ ಬಳಿಕ ಜೇನುತುಪ್ಪವನ್ನು ಬೆರೆಸಿದ್ರೆ ಕೇಸರಿ ಪಾನೀಯ ಸಿದ್ಧವಾಗುತ್ತದೆ. ಇದಕ್ಕೆ ಬಾದಾಮಿಯಿಂದ ಗಾರ್ನಿಶ್ ಮಾಡಿಕೊಂಡು ಕುಡಿಯಿರಿ.