ಬೇರೆಯವರ ಕೈಕೆಳಗೆ ಕೆಲಸ ಮಾಡೋ ಬದಲು ಸ್ವಂತ ವ್ಯಾಪಾರ ಶುರು ಮಾಡ್ಬೇಕೆಂಬ ಬಯಕೆ ಅನೇಕರಿಗಿರುತ್ತದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಯಾವ ಬ್ಯುಸಿನೆಸ್ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲವೂ ಕಾಡುತ್ತದೆ. ನೀವೂ ಬ್ಯುಸಿನೆಸ್ ಮಾಡುವ ಪ್ಲಾನ್ ನಲ್ಲಿದ್ದರೆ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ರಿಪೇರಿ ಕೆಲಸ ಶುರುಮಾಡಿ. ಕಂಪ್ಯೂಟರ್ ಹಾಗೂ ಲ್ಯಾಪ್ ಟಾಪ್ ಬಳಸದ ಜನರಿಲ್ಲ ಎನ್ನುವಂತಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇದರ ಬಳಕೆ ಕಲಿತಿದ್ದಾರೆ. ಮನೆಯಲ್ಲಿ ಒಂದೆರಡು ಲ್ಯಾಪ್ ಟಾಪ್ ಇದ್ದೇ ಇರುತ್ತದೆ.
ಲ್ಯಾಪ್ ಟಾಪ್ ಹಾಗೂ ಕಂಪ್ಯೂಟರ್ ಗೆ ಬೇಡಿಕೆ ಹೆಚ್ಚಿದಂತೆ ಅದ್ರ ರಿಪೇರಿ ಕೆಲಸಕ್ಕೂ ಬೇಡಿಕೆ ಹೆಚ್ಚಿದೆ. ನೀವು ಈಗಾಗಲೇ ಹಾರ್ಡ್ ವೇರ್ ಹಾಗೂ ಸಾಫ್ಟವೇರ್ ಬಗ್ಗೆ ಮಾಹಿತಿ ಹೊಂದಿದ್ದರೆ ಈ ಬ್ಯುಸಿನೆಸ್ ಆರಾಮವಾಗಿ ಶುರು ಮಾಡ್ಬಹುದು. ಒಂದ್ವೇಳೆ ಮಾಹಿತಿ ಇಲ್ಲ ಎನ್ನುವವರು ಅದಕ್ಕೆ ಸಂಬಂಧಿಸಿದ ಕೋರ್ಸ್ ಮಾಡಿ, ಹೆಚ್ಚಿನ ಮಾಹಿತಿ ಪಡೆಯಬೇಕು. ಈ ಬಗ್ಗೆ ಜ್ಞಾನ ಇರುವ ಜನರನ್ನು ಕೆಲಸಕ್ಕೆ ನೇಮಿಸಿಕೊಂಡು ನೀವು ಈ ಉದ್ಯೋಗ ಶುರು ಮಾಡಬಹುದು. ಹಳ್ಳಿಯಿಂದ ಮೆಟ್ರೋಸಿಟಿ ಸೇರಿದಂತೆ ಎಲ್ಲಡೆ ಬೇಡಿಕೆ ಇರುವಂತಹ ಉದ್ಯೋಗ ಇದು. CNet.com ಮತ್ತು ZDN.com ನಂತಹ ಆನ್‌ಲೈನ್ ವೆಬ್ಸೈಟ್ ನಿಂದ ನೀವು ತರಬೇತಿ ಪಡೆಯಬಹುದು. ಇಲ್ಲವೆ ಯುಟ್ಯೂಬ್ ಮೂಲಕವೂ ನೀವು ತರಬೇತಿ ಪಡೆಯಬಹುದು.
ನೀವು ಕಂಪ್ಯೂಟರ್ ಹಾಗೂ ಲ್ಯಾಪ್ ಟಾಪ್ ರಿಪೇರಿಯನ್ನು ಸಣ್ಣದಾಗಿ ಮನೆಯಲ್ಲೇ ಶುರು ಮಾಡ್ಬಹುದು. ಅಂಗಡಿ ಇಟ್ಟಕೊಂಡು ದೊಡ್ಡ ಪ್ರಮಾಣದಲ್ಲೂ ಶುರು ಮಾಡ್ಬಹುದು. ಒಂದ್ವೇಳೆ ಕಂಪ್ಯೂಟರ್ ರಿಪೇರಿ ಕೇಂದ್ರವನ್ನೇ ನೀವು ತೆರೆಯುತ್ತೀರಿ ಎಂದಾದ್ರೆ ಐದು ಲಕ್ಷ ಖರ್ಚು ಬರುತ್ತದೆ. ನೀವು ಮದರ್ ಬೋರ್ಡ್, ಪ್ರೊಸೆಸರ್, ರ್ಯಾಮ್ ಸೇರಿದಂತೆ ಕೆಲ ವಸ್ತುವನ್ನು ಅಂಗಡಿಯಲ್ಲಿ ಇಡಬೇಕಾಗುತ್ತದೆ. ಆರಂಭದಲ್ಲಿ ನಿಮ್ಮ ಗಳಿಕೆ ಕಡಿಮೆಯಿದ್ರೂ ನೀವು ಉತ್ತಮ ಸೇವೆ ನೀಡುವ ಶುರು ಮಾಡಿದ ಮೇಲೆ ದಿನಕ್ಕೆ ಮೂರು ಸಾವಿರದವರೆಗೆ ದುಡಿಯಬಹುದು.