ಬೆಂಗಳೂರು: ತಿಂಗಳಾಂತ್ಯಕ್ಕೆ ರಾಜ್ಯಾದ್ಯಂತ ಬ್ರೈನ್ ಹೆಲ್ತ್ ಕ್ಲಿನಿಕ್ ಗಳನ್ನು ಆರಂಭಿಸಲಾಗುವುದು. ನಿಮ್ಹಾನ್ಸ್ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಮತ್ತು ಪಾರ್ಶ್ವ ವಾಯುವಿಗೆ ಗೋಲ್ಡನ್ ಅವರ್ ನಲ್ಲಿ ಚಿಕಿತ್ಸೆ ಕಲ್ಪಿಸಲು ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲೂ ಬ್ರೈನ್ ಹೆಲ್ತ್ ಕ್ಲಿನಿಕ್ ಗಳನ್ನು ಆರಂಭಿಸಲು ಸರ್ಕಾರ ಸಿದ್ಧತೆ ಕೈಗೊಂಡಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಜಿಲ್ಲೆಯಲ್ಲಿ ಈಗಾಗಲೇ ಬ್ರೈನ್ ಹೆಲ್ತ್ ಕ್ಲಿನಿಕ್ ಗಳು ಯಶಸ್ವಿಯಾಗಿದ್ದು, ತಿಂಗಳಾಂತ್ಯಕ್ಕೆ ರಾಜ್ಯದಾದ್ಯಂತ ಆರಂಭವಾಗಲಿವೆ. ನಿಮ್ಹಾನ್ಸ್ ಸಹಯೋಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯೋಜನೆ ಜಾರಿಗೊಳಿಸುತ್ತಿದೆ.
ಮೈಗ್ರೇನ್, ತಲೆನೋವು ಸೇರಿದಂತೆ ಮಿದುಳಿಗೆ ಸಂಬಂಧಪಟ್ಟ ಕಾಯಿಲೆಗೆ ಚಿಕಿತ್ಸೆ ನೀಡಲಾಗುವುದು. ಇದರಿಂದ ಸ್ಥಳೀಯವಾಗಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಲಿದೆ. 25 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಿದ್ದು, ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ.
ಬ್ರೈನ್ ಕ್ಲಿನಿಕ್ ಗಳಲ್ಲಿ ಸ್ಟ್ರೋಕ್, ಬುದ್ಧಿ ಮಾಂಧ್ಯತೆ, ಅಪಸ್ಮಾರ, ತಲೆನೋವಿನಂತಹ ನರ ವೈಜ್ಞಾನಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲಿದ್ದು, ರೋಗಿಗಳಿಗೆ ಅಗತ್ಯವಿರುವ ಸಮಾಲೋಚನೆ, ಫಿಸಿಯೋಥೆರಪಿ, ಸ್ಪೀಚ್ ಥೆರಪಿ ಒದಗಿಸಲಾಗುವುದು.
ಪಾರ್ಶ್ವವಾಯು ರೋಗಿಗಳಿಗೆ ಗೋಲ್ಡನ್ ಅವರ ನಲ್ಲಿ ಚಿಕಿತ್ಸೆ ನೀಡಲು ಬ್ರೈನ್ ಹೆಲ್ತ್ ಕ್ಲಿನಿಕ್ ಗಳು ಸಹಕಾರಿಯಾಗಲಿವೆ. ರೋಗಿಯ ಸಾವು ಅಥವಾ ಅಂಗವೈಕಲ್ಯದ ಸಾಧ್ಯತೆಗಳನ್ನು ಇದು ಕಡಿಮೆ ಮಾಡುತ್ತದೆ. 40 ರಷ್ಟು ರೋಗಿಗಳು ಗೋಲ್ಡನ್ ಅವರ್ ನಲ್ಲಿ ಆಸ್ಪತ್ರೆಗಳನ್ನು ಸಂಪರ್ಕಿಸಿದರೂ, ಆರೋಗ್ಯ ಸರಿಯಾದ ಸೌಲಭ್ಯಗಳಿಲ್ಲದ ಕಾರಣ ಹೆಚ್ಚಿನ ಜನರು ಅಂಗವೈಕಲ್ಯಕ್ಕೆ ತುತ್ತಾಗುತ್ತಾರೆ. ಇದನ್ನು ನಿವಾರಿಸಲು ಪ್ರತಿ ಜಿಲ್ಲೆಯಲ್ಲಿಯೂ ಬ್ರೈನ್ ಹೆಲ್ತ್ ಕ್ಲಿನಿಕ್ ಗಳನ್ನು ಸೇವೆಗೆ ಸಿದ್ಧಪಡಿಸಲಾಗಿದ್ದು, ತಿಂಗಳಾಂತ್ಯಕ್ಕೆ ಸೇವೆ ಆರಂಭವಾಗಲಿದೆ. ಸ್ಥಳೀಯ ಹಂತದಲ್ಲಿಯೇ ಗುಣಮಟ್ಟದ ನರರೋಗ ಚಿಕಿತ್ಸೆ ಸಿಗಲಿದೆ. ಪ್ರತಿ ಕ್ರಿನಿಕ್ ಗಳಲ್ಲಿಯೂ ನರರೋಗ ತಜ್ಞರು, ಮಾನಸಿಕ ಆರೋಗ್ಯ ತಜ್ಞರು, ಟೆಲಿ ಸಮಾಲೋಚನೆ ವ್ಯವಸ್ಥೆ ಮಾಡಲಾಗಿದೆ.