
ಬೆಂಗಳೂರು: 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ/ ಇತರೆ ಮಾಧ್ಯಮದ ಜೊತೆ ಆಂಗ್ಲ ಮಾಧ್ಯಮ(ದ್ವಿಭಾಷಾ) ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ.
2000 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ(ಕನ್ನಡ ಮತ್ತು ಇಂಗ್ಲೀಷ್) ಶಾಲೆಗಳಾಗಿ ಪರಿವರ್ತಿಸಲಾಗುವುದು ಎಂದು ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ಸಿಎಂ ಘೋಷಿಸಿದ್ದರು.
ಸರ್ಕಾರಿ ಶಾಲೆಗಳ ಶೈಕ್ಷಣಿಕ ಬಲವರ್ಧನೆಗಾಗಿ ಹಾಲಿ ನಡೆಯುತ್ತಿರುವ ಪ್ರಾಥಮಿಕ ಶಾಲೆಗಳಿಗೆ ಅಗತ್ಯಾನುಸಾರ 1ನೇ ತರಗತಿಯಿಂದ ಹೊಸದಾಗಿ ಆಂಗ್ಲ ಮಾಧ್ಯಮ(ದ್ವಿಭಾಷ ಮಾಧ್ಯಮ) ಪ್ರಾರಂಭಿಸಲು ಈ ಹಿಂದೆ ನಿಗದಿಡಿಸಿದ ಮಾನದಂಡಗಳಂತೆ ಪ್ರಸ್ತಾವನೆ ಪಡೆದು ತಾಲ್ಲೂಕು / ಜಿಲ್ಲಾ / ವಿಭಾಗ ಹಂತದಲ್ಲಿ ಪರಿಶೀಲನಾ ಸಮಿತಿಗಳು ಪರಿಶೀಲಿಸಿ ಶಿಫಾರಸ್ಸು ಮಾಡಲು ಚೆಕ್ ಲಿಸ್ಟ್‌ನೊಂದಿಗೆ ವೇಳಾ ಪಟ್ಟಿ ನಿಗದಿಪಡಿಸಿ ಸುತ್ತೋಲೆ ಮೂಲಕ ಸೂಚಿಸಿದ್ದು, ಆದರಂತೆ ಸ್ವೀಕೃತವಾಗಿರುವ ಪ್ರಸ್ತಾವನೆಗಳನ್ನು ಪರಿಶೀಲಿಸಿ ಒಟ್ಟು 1419 ಶಾಲೆಗಳಲ್ಲಿ 2024-25ನೇ ಸಾಲಿನಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ/ ಇತರೆ ಮಾಧ್ಯಮದ ಜೊತೆ ಆಂಗ್ಲ ಮಾಧ್ಯಮ (ದ್ವಿಭಾಷಾ) ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ.
ಈ ಕುರಿತಾಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸಲ್ಲಿಸಿರುವ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶಿಸಿದೆ.
ರಾಜ್ಯದ 1419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2024-25ನೇ ಸಾಲಿನಿಂದ 1ನೇ ತರಗತಿಯಿಂದ ಹಾಲಿ ನಡೆಯುತ್ತಿರುವ ಕನ್ನಡ/ಇತರೆ ಮಾಧ್ಯಮದ ಜೊತೆಗೆ ಹೊಸದಾಗಿ ಆಂಗ್ಲ ಮಾಧ್ಯಮ(ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಾರಂಭಿಸಲು ಷರತ್ತುಗಳಿಗೊಳಪಟ್ಟು ಅನುಮತಿ ನೀಡಿ ಆದೇಶಿಸಿದೆ.

