ಬೆಂಗಳೂರು: ನಿಷೇಧಿತ ನಕಲಿ ಛಾಪಾ ಕಾಗದ ದಂಧೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಛಾಪಾ ಕಾಗದ ನಿಷೇಧವಾಗಿದ್ದರೂ, ಬೆಂಗಳೂರಿನ ಕೆಜಿ ರಸ್ತೆಯ ಕಂದಾಯ ಭವನ ಆವರಣದಲ್ಲಿರುವ ಟೈಪಿಂಗ್ ಅಂಗಡಿಗಳಲ್ಲಿ ನಕಲಿ ಛಾಪಾ ಕಾಗದಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳನ್ನು ಬಳಸಿಕೊಂಡು ಹಳೆ ಕಂದಾಯ ದಾಖಲೆಗಳನ್ನು ಸೃಷ್ಟಿಸಲಾಗುತ್ತಿತ್ತು.
ಸರ್ಕಾರಿ ಸೀಲ್ ಹಾಕಿದ 40 ವರ್ಷ ಹಿಂದಿನ ನಕಲಿ ಛಾಪಾ ಕಾಗದ ಕೂಡ ಲಭ್ಯವಾಗಿದೆ. ಸಿಸಿಬಿ ಪೊಲೀಸರು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ 7 ಆರೋಪಿಗಳನ್ನು ಬಂಧಿಸಿದ್ದಾರೆ.
ನಿಷೇಧಿತ ಛಾಪಾಕಾಗದ ಮಾರಾಟ ಮಾಡುತ್ತಿರುವುದಲ್ಲದೇ, ಅವುಗಳನ್ನು ಬಳಸಿ ಹಳೆಯ ಕಂದಾಯ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ನಕಲಿ ಛಾಪಾ ಕಾಗದ ದಾಖಲೆ ನೀಡಲು 10,000 ಕ್ಕೆ ಡೀಲ್ ಕುದುರಿಸಿದ್ದು, ಮರುದಿನ ನಕಲಿ ಛಾಪಾ ಕಾಗದ ಅಥವಾ ಹಳೆಯ ನಕಲಿ ದಾಖಲೆಯೊಂದಿಗೆ ಬಂದಿದ್ದ ಆರೋಪಿಗಳನ್ನು ಬಂಧಿಸಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಸರ್ಕಾರ ಸೀಲ್ ಹೊಂದಿರುವ ನಕಲಿ ಛಾಪಾ ಕಾಗದಗಳು ಪತ್ತೆಯಾಗಿವೆ.