
ಚೆನ್ನೈ: ಕೇಂದ್ರ ಸರ್ಕಾರದ ಜನೌಷಧಿ ರೀತಿಯಲ್ಲಿ ತಮಿಳುನಾಡಿನಾದ್ಯಂತ ಸಬ್ಸಿಡಿ ದರದಲ್ಲಿ ಜನರಿಗೆ ಔಷಧ ಒದಗಿಸಲು ಸುಮಾರು ಒಂದು ಸಾವಿರ ಮುದಲ್ವಾರ್ ಮರುಂಧ ಗಂಗಲ್ ಔಷಧ ಅಂಗಡಿಗಳಿಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.
ತಮಿಳುನಾಡು ಮುಖ್ಯಮಂತ್ರಿ, ಎಂ.ಕೆ. ಸ್ಟಾಲಿನ್ ಸೋಮವಾರ ಔಷಧ ಅಂಗಡಿಗಳನ್ನು ಉದ್ಘಾಟಿಸಿದ್ದಾರೆ. ಈ ಔಷಧ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಶೇಕಡ 75 ರಷ್ಟು ರಿಯಾಯಿತಿವರೆಗೆ ಔಷಧಗಳನ್ನು ಪೂರೈಸಲಾಗುವುದು. 1500 ಬಿ ಫಾರ್ಮಾ, ಡಿ ಫಾರ್ಮಾ, ಡಿಪ್ಲೋಮಾ ಮಾಡಿದವರಿಗೆ ಉದ್ಯೋಗಾವಕಾಶವನ್ನು ಇದು ಒದಗಿಸಿದೆ ಎಂದು ಸಿಎಂ ತಿಳಿಸಿದ್ದಾರೆ.
ಇಂತಹ ಮೆಡಿಕಲ್ ಶಾಪ್‌ಗಳನ್ನು ನಡೆಸಲು ಫಾರ್ಮಾಸಿಸ್ಟ್ ಮತ್ತು ಕೋ ಆಪರೇಟಿವ್ ಸೊಸೈಟಿಗಳಿಗೆ ಸರ್ಕಾರದಿಂದ ಸಬ್ಸಿಡಿ ನೀಡಲಾಗಿದೆ. ಉದ್ಯಮಿಗಳಿಗೆ ಮೂರು ಲಕ್ಷ, ಕೋ ಆಪರೇಟಿವ್ ಸೊಸೈಟಿಗಳಿಗೆ ಎರಡು ಲಕ್ಷ ರೂ. ಸಬ್ಸಿಡಿ ನೀಡಲಾಗಿದೆ. ಜನೌಔಷಧಿ ಕೇಂದ್ರಗಳಲ್ಲಿ ಪ್ರಮುಖ ಔಷಧಿಗಳ ಜನರಿಕ್ ಬ್ರಾಂಡ್ ಔಷಧಿಗಳು ಕಡಿಮೆ ದರದಲ್ಲಿ ಸಿಗುತ್ತವೆ. ಈ ಔಷಧ ಅಂಗಡಿಗಳಲ್ಲಿ ಎಲ್ಲಾ ರೀತಿಯ ಔಷಧಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು ಎಂದು ಹೇಳಿದ್ದಾರೆ.