alex Certify ರಾತ್ರಿಯಲ್ಲೂ ಮಕ್ಕಳ ಮನೆಗೆ ಶಿಕ್ಷಕರ ಭೇಟಿ: ಎಸ್ಎಸ್ಎಲ್ಸಿ ಪರೀಕ್ಷೆ ತಯಾರಿಗೆ ಹೆಚ್ಚಿನ ನಿಗಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿಯಲ್ಲೂ ಮಕ್ಕಳ ಮನೆಗೆ ಶಿಕ್ಷಕರ ಭೇಟಿ: ಎಸ್ಎಸ್ಎಲ್ಸಿ ಪರೀಕ್ಷೆ ತಯಾರಿಗೆ ಹೆಚ್ಚಿನ ನಿಗಾ

ದಾವಣಗೆರೆ: ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ. ಪಟ್ಟಣ, ನಗರ ಪ್ರದೇಶದಲ್ಲಿನ ಶಾಲೆಗಳ ವಿದ್ಯಾರ್ಥಿಗಳಿಗೆ ಕಲಿಕೆಗೆ ಹೆಚ್ಚಿನ ಅವಕಾಶಗಳಿರುತ್ತವೆ.

ಆದರೆ, ಗ್ರಾಮೀಣ ಪ್ರದೇಶಗಳ ಅದರಲ್ಲೂ ಕುಗ್ರಾಮದ ಶಾಲಾ ಮಕ್ಕಳಿಗೆ ಶಾಲೆಗೆ ಹೋಗುವುದು, ಓದುವುದು, ಕಲಿಯುವುದು ಕಷ್ಟದ ಕೆಲಸ. ಅದರಲ್ಲಿಯೂ ಬಡ ಕುಟುಂಬದ ಮಕ್ಕಳಿಗಂತೂ ಪರೀಕ್ಷೆಗಾಗಿ ಓದಲು ಸಮಯವೇ ಸಿಗದಂತಹ ಪರಿಸ್ಥಿತಿ ಇದೆ. ಇದನ್ನು ಮನಗಂಡ ಸರ್ಕಾರಿ ಶಾಲೆಯ ಶಿಕ್ಷಕ ವೃಂದ ಎಸ್ಎಸ್ಎಲ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಕ್ಕಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಬಸವಪಟ್ಟಣ ಸಮೀಪದ ಯಲೋದಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕ ವೃಂದದವರು ಎಸ್ಎಸ್ಎಲ್ಸಿ ಮಕ್ಕಳ ಕಲಿಕೆಯನ್ನು ರಾತ್ರಿ ವೇಳೆಯೂ ಗಮನಿಸತೊಡಗಿದ್ದಾರೆ. ಮಕ್ಕಳ ಓದಿಗೆ ಸಮಯ, ವಾತಾವರಣ ಕಲ್ಪಿಸುವಂತೆ ಪೋಷಕರಿಗೆ ತಿಳಿ ಹೇಳಿದ್ದಾರೆ.

ಕುಗ್ರಾಮವಾದ ಯಲೋದಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ 13 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅಂದ ಹಾಗೇ, ಇಲ್ಲಿ ಪ್ರೌಢಶಾಲೆ ಇದೆ, ಶಿಕ್ಷಕರು ಕಾಳಜಿ ವಹಿಸುತ್ತಾರೆ ಎಂಬ ಕಾರಣಕ್ಕೆ ಮಾತ್ರ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ. ಇಲ್ಲದ್ದರೆ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುವವರೇ ಹೆಚ್ಚು.

ಇತ್ತೀಚೆಗೆ ನಡೆದ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವುದನ್ನು ಮನಗಂಡ ಶಿಕ್ಷಕ ವೃಂದ ರಾತ್ರಿ ವೇಳೆಯಲ್ಲೂ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಮಕ್ಕಳು ಓದುತ್ತಿದ್ದಾರೆಯೇ ಎಂಬುದನ್ನು ಗಮನಿಸುತ್ತಿದೆ. ಮತ್ತು ಅಲ್ಲಿಯೇ ವಿಷಯಗಳ ಬಗ್ಗೆ ಮಕ್ಕಳಲ್ಲಿರುವ ಗೊಂದಲಗಳನ್ನು ನಿವಾರಿಸಲಾಗುತ್ತಿದೆ. ಮುಖ್ಯ ಶಿಕ್ಷಕ ಉಮೇಶ್ ಸೇರಿದಂತೆ ಶಾಲೆಯ ಶಿಕ್ಷಕರು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿಯೇ ಪ್ರತಿದಿನ ಶಾಲಾ ಅವಧಿ ಮುಗಿದ ನಂತರ ಸಂಜೆ ವಿಶೇಷ ತರಗತಿಗಳನ್ನು ನಡೆಸುತ್ತಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳ ಶುಲ್ಕವನ್ನು ಶಿಕ್ಷಕರೇ ಭರಿಸಿದ್ದಾರೆ.

ಯಲೋದಹಳ್ಳಿಯಲ್ಲಿ ಬಹುತೇಕರು ಬಡವರು, ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಜಮೀನು, ತೋಟದ ಕೆಲಸಗಳಿಗೆ ಮಕ್ಕಳನ್ನು ಕೂಡ ಕರೆದುಕೊಂಡು ಹೋಗುತ್ತಾರೆ. ಬಹುತೇಕರಿಗೆ ಓದಲು ಬರೆಯಲು ಬರುವುದಿಲ್ಲ. ಮಕ್ಕಳು ಏನನ್ನು ಓದುತ್ತಿದ್ದಾರೆ ಎನ್ನುವುದು ಕೂಡ ಅನೇಕ ಪೋಷಕರಿಗೆ ಗೊತ್ತಿಲ್ಲ. ಇದನ್ನು ಮನಗಂಡ ಶಿಕ್ಷಕರು ಮಕ್ಕಳ ಕಲಿಕೆಗಾಗಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ವಿಶೇಷ ತರಗತಿಗಳನ್ನು ನಡೆಸುವ ಜೊತೆಗೆ ರಾತ್ರಿ ವೇಳೆಯೂ ಮಕ್ಕಳ ಮನೆಗಳಿಗೆ ತೆರಳಿ ಓದುತ್ತಿದ್ದಾರೆಯೇ ಎಂಬುದರ ಬಗ್ಗೆ ನಿಗಾ ವಹಿಸಿದ್ದಾರೆ. ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗದೆ ಓದಲು ವ್ಯವಸ್ಥೆ ಮಾಡುವಂತೆ ಪೋಷಕರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ.

ಇನ್ನು ಜಾತ್ರೆ, ಊರ ಹಬ್ಬ ಎಂದು ಮಕ್ಕಳು ರಜೆ ಹಾಕಿದ್ದರಿಂದ ಓದಿನಲ್ಲಿ ಕೊಂಚ ಅಡಚಣೆಯಾಗಿತ್ತು. ಇದನ್ನು ಮನಗಂಡ ಶಿಕ್ಷಕರು ಸಂಜೆ ವಿಶೇಷ ತರಗತಿ ನಡೆಸುವ ಜೊತೆಗೆ ರಾತ್ರಿಯೂ ಕಲಿಕೆ ಬಗ್ಗೆ ಹೆಚ್ಚಿನ ಆಸಕ್ತಿ, ಕಾಳಜಿ ತೋರಿಸಿದ್ದಾರೆ. ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗದೆ ಕನಿಷ್ಠ ಎರಡು ತಿಂಗಳಾದರೂ ಪರೀಕ್ಷೆಗೆ ಓದಿಸಲು ಸಮಯ ಕೊಡುವಂತೆ ಪೋಷಕರಿಗೆ ತಿಳಿಸಿದ್ದಾರೆ.

ಎಸ್ಎಸ್ಎಲ್ಸಿ ಪಾಸ್ ಮಾಡಿಕೊಂಡಲ್ಲಿ ಮಕ್ಕಳು ಮುಂದೆ ಓದಲು ಅನುಕೂಲವಾಗುತ್ತದೆ. ಫೇಲಾದ ಮಕ್ಕಳಂತೂ ಅಲ್ಲಿಗೇ ಶಿಕ್ಷಣ ನಿಲ್ಲಿಸುತ್ತಾರೆ ಎನ್ನುವ ಉದ್ದೇಶದಿಂದ ಶಾಲೆಯ ಮುಖ್ಯ ಶಿಕ್ಷಕ ಉಮೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಹಾಲೇಶ್ ಹಾಗೂ ಶಿಕ್ಷಕರಾದ ಎಸ್.ಎಂ. ಚಲುವರಾಜ್, ರುದ್ರ ನಾಯ್ಕ್, ಜಯಪ್ಪ, ಗಜಾನನ, ಪ್ರಭಾಕರ್ ನಾಯ್ಕ್, ಶಿಕ್ಷಕಿಯರಾದ ಶೋಭಾ, ಶಿವಗಂಗಾ ಅವರ ಪ್ರಯತ್ನದಿಂದಾಗಿ ಎಸ್‌ಎಸ್‌ಎಲ್‌ಸಿ ಮಕ್ಕಳ ಕಲಿಕೆ ರಾತ್ರಿಯೂ ಸಾಗಿದೆ. ಎಲ್ಲಾ ಮಕ್ಕಳು ಆಸಕ್ತಿಯಿಂದ ಕಲಿಯತೊಡಗಿದ್ದು, ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಮಕ್ಕಳ ಕಲಿಕೆಯ ಆಸಕ್ತಿ ಅವರಿಗೆ ಬೆನ್ನೆಲುಬಾಗಿ ನಿಂತ ಶಿಕ್ಷಕರಿಗೆ ಹ್ಯಾಟ್ಸಾಫ್.

-ನಿರಂಜನ ಮೂರ್ತಿ ಹೆಚ್.ಸಿ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...