
ಬೆಂಗಳೂರು: ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ರಾಜ್ಯ ಪಠ್ಯಕ್ರಮದ ತರಗತಿ ವಿದ್ಯಾರ್ಥಿಗಳು ಇಷ್ಟಪಟ್ಟಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಯಾವುದೇ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜಿನಲ್ಲಿ ಅದೇ ತರಗತಿಗಳಿಗೆ ಮತ್ತೆ ದಾಖಲಾಗಿ ವ್ಯಾಸಂಗ ಮಾಡಬಹುದು ಎಂದು ಸರ್ಕಾರ ಆದೇಶಿಸಿದೆ.
ಖಾಸಗಿ ಶಾಲೆ, ಕಾಲೇಜುಗಳಲ್ಲಿ ಫೇಲಾದವರು ಅದೇ ಶಾಲೆ, ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅವಕಾಶವಿಲ್ಲ. ಬದಲಿಗೆ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಮರು ದಾಖಲಾತಿ ಪಡೆದು ಮತ್ತೊಂದು ವರ್ಷ ತರಗತಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಬಹುದಾಗಿದೆ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಲ್ಲಿ ಮತ್ತೆ ಪರೀಕ್ಷೆ ಬರೆಯುವವರ ಸಂಖ್ಯೆ ಹಾಗೂ ಅವರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಇರುವ ಕಾರಣ ಇದನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಸರ್ಕಾರ ಇಂತಹ ಅವಕಾಶ ಕಲ್ಪಿಸಿದೆ.
ಇದಕ್ಕಾಗಿ ಕೆಲವು ನಿಬಂಧನೆ ವಿಧಿಸಲಾಗಿದೆ. ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿಗೆ ದಾಖಲಾತಿ ಪಡೆಯುವವರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ನಮ್ಮ ಒಳ್ಳೆಯ ನಿರ್ಣಯ ಮಂಡಳಿ ನಡೆಸುವ ಪರೀಕ್ಷೆ -1, 2, 3 ರ ಪೈಕಿ ಕನಿಷ್ಠ 1 ಮತ್ತು 2 ಪರೀಕ್ಷೆ ಬರೆದು ಅನುತ್ತೀರ್ಣರಾಗಿರಬೇಕು. ಮರು ದಾಖಲಾತಿ ಪಡೆದವರು ಇತರೆ ವಿದ್ಯಾರ್ಥಿಗಳ ರೀತಿ ನಿತ್ಯ ತರಗತಿಗೆ ಹಾಜರಾಗಿ ಎಲ್ಲಾ ವಿಷಯಗಳ ಪೂರ್ಣಾವಧಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಎಲ್ಲಾ ಆರು ವಿಷಗಳಿಗೂ ಮತ್ತೆ ಪರೀಕ್ಷೆ ಬರೆಯಬೇಕು ಎಂದು ಹೇಳಲಾಗಿದೆ.
10ನೇ ತರಗತಿಗೆ ಮರು ದಾಖಲಾತಿ ಪಡೆಯುವ ಇಂತಹ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಶೂ, ಸಾಕ್ಸ್, ಮಧ್ಯಾಹ್ನದ ಬಿಸಿಯೂಟ ಸೇರಿ ಇತರೆ ವಿದ್ಯಾರ್ಥಿಗಳಿಗೂ ಸಿಗುವ ಎಲ್ಲಾ ಸೌಲಭ್ಯ ಒದಗಿಸಲಾಗುವುದು. ಪ್ರವೇಶ ಶುಲ್ಕದ ವಿನಾಯಿತಿ ನೀಡಲಾಗುವುದು.