ಬೆಂಗಳೂರು: ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷಾ ವೇಳಾ ಪಟ್ಟಿ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಕೆಸರೆರಚಾಟ ಆರಂಭವಾಗಿದೆ
ಈಗಾಗಲೇ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟವಾಗಿದ್ದು, ಒಂದು ಪರೀಕ್ಷೆಯ ಸಮಯದ ಬಗ್ಗೆ ಇದೀಗ ವಿಪಕ್ಷ ಬಿಜೆಪಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ನಾಯಕರು ರಾಜಕೀಯ ಕೆಸರೆರಚಾಟ ಆರಂಭ ಮಾಡಿದ್ದಾರೆ. ನಮಾಜ್ ಕಾರಣಕ್ಕಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಮಧ್ಯಾಹ್ನ ಇಡಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಕಾಂಗ್ರೆಸ್ ಕಿಡಿಕಾರಿದೆ.
ಮಾರ್ಚ್ ಒಂದನೇ ತಾರೀಖಿನಂದು ಪಿಯುಸಿ ಪರೀಕ್ಷೆ ಆರಂಭವಾಗುತ್ತಿರುವ ಕಾರಣ ಅ ದಿನದ SSLC ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ. ಮಾರನೇ ದಿನ ಶನಿವಾರ ಪಿಯುಸಿ ಪರೀಕ್ಷೆ ಇಲ್ಲದ ಕಾರಣ SSLC ಪರೀಕ್ಷೆ ಬೆಳ್ಳಿಗೆಯೇ ಆರಂಭವಾಗುತ್ತದೆ. ಪರೀಕ್ಷಾ ಕೇಂದ್ರಗಳ ಕೊರತೆ ಹಾಗೂ ಗೊಂದಲ ಉಂಟಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ಇದರಲ್ಲಿ ಸುಳ್ಳು ಅಪಪ್ರಚಾರದ ಮೂಲಕ ಪ್ರಚೋದನೆಗೆ ಬಳಸಿಕೊಳ್ಳಲು ಮುಂದಾಗಿರುವ ರಾಜ್ಯ ಬಿಜೆಪಿಗೆಗೆ ಕನಿಷ್ಠ ಮರ್ಯಾದೆ ಇಲ್ಲ. ನಮಾಜ್ ಮಾಡುವುದಕ್ಕಾಗಿ ಶುಕ್ರವಾರ SSLC ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಏರ್ಪಡಿಸಲಾಗಿದೆ ಎನ್ನುವ ಬಿಜೆಪಿ ಗಾಂಪರು ಅದೇ ದಿನ ಬೆಳಿಗ್ಗೆ PUC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನಮಾಜ್ ಮಾಡುವ ಅಗತ್ಯವಿಲ್ಲವೇ ಎಂಬುದನ್ನು ಉತ್ತರಿಸಲಿ! ಎಂದು ತಿರುಗೇಟು ನೀಡಿದೆ.
ಈ ಸುಳ್ಳು ಹರಡಲು ಕಾರಣಕರ್ತನಾದ ಮಾಜಿ ಪತ್ರಕರ್ತ!?, ಹಾಲಿ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಹೊಟ್ಟೆಗೆ ತಿನ್ನುವುದು ಏನನ್ನ ಎಂಬುದನ್ನು ತಿಳಿಸಲಿ. ಈತ ಮುಖ್ಯಸ್ಥನಾಗಿದ್ದ ಮಾಧ್ಯಮ ಸಂಸ್ಥೆಯೂ ಆತ ಹೇಳಿದ ಸುಳ್ಳನ್ನೇ ಪ್ರಸಾರ ಮಾಡಿದೆ ಎಂದರೆ ಆತ ನಿಜಕ್ಕೂ ಪತ್ರಕರ್ತನಾಗಿ ಮಾಜಿಯಾಗಿದ್ದಾನಾ ಎಂಬ ಅನುಮಾನ ಮೂಡುತ್ತಿದೆ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ.