
ಕಲಬುರಗಿ: ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಕ್ಕೆ ಅಕ್ರಮವಾಗಿ ಪ್ರವೇಶಿಸಿದ ಬಂಕಲಗಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಭೀಮಾಶಂಕರ ಅವರನ್ನು ಡಿಡಿಪಿಐ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರು ಏಪ್ರಿಲ್ 2ರಂದು ಅಫಜಲಪುರ ತಾಲೂಕಿನ ಶಿರವಾಳ ಗ್ರಾಮದ ವೀರ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ತಪಾಸಣೆಗೆ ಹೋಗಿದ್ದ ವೇಳೆ ಪರೀಕ್ಷಾ ಕೇಂದ್ರದ ನಿರ್ಬಂಧಿತ ಪ್ರದೇಶದಲ್ಲಿ ವ್ಯಕ್ತಿ ಸಂಶಯಾಸ್ಪದ ರೀತಿಯಲ್ಲಿ ಅಲೆದಾಡುತ್ತಿದ್ದರು. ಈ ವೇಳೆ ಅವರನ್ನು ವಿಚಾರಣೆ ಮಾಡುವಷ್ಟರಲ್ಲಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಬೆನ್ನಟ್ಟಿ ಹಿಡಿದು ವಿಚಾರಿಸಲಾಗಿದೆ.
ಅವರು ಬಂಕಲಗಾ ಗ್ರಾಮದ ಪ್ರೌಢಶಾಲೆಯ ಶಿಕ್ಷಕ ಭೀಮಾಶಂಕರ ಎನ್ನುವುದು ದೃಢಪಟ್ಟಿದೆ. ವರದಿ ಆಧರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಶಿಕ್ಷಕ ಭೀಮಾಶಂಕರ ಅವರನ್ನು ಅಮಾನತು ಮಾಡಿದ್ದಾರೆ.