ಬೆಂಗಳೂರು: ರಾಜ್ಯ ಪಠ್ಯಕ್ರಮದ ಎಲ್ಲಾ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಿಂದ ಅರ್ಧ ವಾರ್ಷಿಕ ಪರೀಕ್ಷೆಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡುವ ಏಕರೂಪ ಪ್ರಶ್ನೆಪತ್ರಿಕೆಗೆ ಉತ್ತರಿಸಬೇಕಿದೆ.
ಮೌಲ್ಯಮಾಪನ ಪ್ರಕ್ರಿಯೆ ಆಯಾ ಶಾಲೆಗಳಲ್ಲಿಯೇ ನಡೆಯಲಿದೆ. ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಶಾಲಾ ಹಂತದ ಬದಲು ತಾನೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಮಂಡಳಿ ನೀಡಲಾರಂಭಿಸಿದೆ. ಈ ಸಾಲಿನಿಂದ ಸರ್ಕಾರದ ನಿರ್ದೇಶನದಂತೆ ಅರ್ಧವಾರ್ಷಿಕ ಪರೀಕ್ಷೆಗೂ ಸಂಕಲನಾತ್ಮಕ ಮೌಲ್ಯಮಾಪನ-1 ರಾಜ್ಯದಾತ್ಯಂತ ಏಕರೂಪದ ಪ್ರಶ್ನೆ ಪತ್ರಿಕೆ ನೀಡಲು ತೀರ್ಮಾನಿಸಲಾಗಿದೆ.
ಪ್ರಕಟಿಸಲಾದ ವೇಳಾಪಟ್ಟಿಯಂತೆ ಸೆ. 24 ರಿಂದ ಅ.1ರವರೆಗೆ ಎಸ್ಎಸ್ಎಲ್ಸಿ ಮಧ್ಯ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಮಂಡಳಿಯಿಂದ ನೀಡುವ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯಬೇಕಿದೆ. ಕಳೆದ ಸಾಲಿನಿಂದ ಪೂರ್ವ ಸಿದ್ಧತಾ ಪರೀಕ್ಷೆಗೆ ಮಂಡಳಿಯೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ನೀಡುತ್ತಿದ್ದು, ಸರ್ಕಾರದ ನಿರ್ದೇಶನದಂತೆ ಈ ಸಾಲಿನಿಂದ ಅರ್ಧ ವಾರ್ಷಿಕ ಪರೀಕ್ಷೆಗೂ ಅದನ್ನು ವಿಸ್ತರಿಸಲಾಗಿದೆ.