ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆ ಮಾರ್ಚ್ 31 ರ ಇಂದಿನಿಂದ ಆರಂಭವಾಗಲಿದೆ.
ಪರೀಕ್ಷೆ ಬರೆಯಲು ರಾಜ್ಯದ 5833 ಸರ್ಕಾರಿ ಶಾಲೆ, 3,605 ಅನುದಾನಿತ 6060 ಅನುದಾನ ರಹಿತ ಶಾಲೆಗಳ 8.42 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 3305 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಸರ್ಕಾರಿ ಶಾಲೆಗಳ 3.60 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅನುದಾನಿತ ಶಾಲೆಗಳ 2.20 ಲಕ್ಷ ಹಾಗೂ ಅನುದಾನ ರಹಿತ ಶಾಲೆಗಳ 2.61 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಇಂದು ಪ್ರಥಮ ಭಾಷೆ ಕನ್ನಡ, ಹಿಂದಿ, ತೆಲುಗು, ಮರಾಠಿ, ಉರ್ದು, ಸಂಸ್ಕೃತ, ಇಂಗ್ಲಿಷ್ ವಿಷಯದ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ ಪರೀಕ್ಷೆ ನಡೆಯಲ್ಲಿದೆ.
ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್, ಸ್ಮಾರ್ಟ್ ವಾಚ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ.
ಪರೀಕ್ಷಾ ಕೇಂದ್ರಗಳಿಗೆ ಹೋಗಿ ಬರಲು ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.
ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವ ಉದ್ದೇಶದಿಂದ ಮುಂಜಾಗೃತಾ ಕ್ರಮವಾಗಿ ಪರೀಕ್ಷೆಗಳು ನಡೆಯುವ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ ಫಾಸಲೆಯವರೆಗೆ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಸಿಆರ್‍ಪಿಸಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿ ಹೊರತುಪಡಿಸಿ ಇತರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ ಫಾಸಲೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಪರೀಕ್ಷೆ ನಡೆಯಲಿರುವ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತಮುತ್ತ ಐದು ಮತ್ತು ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿದೆ. ಪರೀಕ್ಷಾ ಅವಧಿಯಲ್ಲಿ ಕೇಂದ್ರಗಳ ಸುತ್ತಮುತ್ತಲಿನ ಟೈಪಿಂಗ್, ಜೆರಾಕ್ಸ್, ಫ್ಯಾಕ್ಸ್ ಅಂಗಡಿಗಳು ತೆರೆಯುವುದನ್ನು ನಿರ್ಬಂಧಿಸಿದೆ.