ಬೆಂಗಳೂರು: ನಿಗದಿತ ವೇಳಾಪಟ್ಟಿಯಂತೆ ಆಗಸ್ಟ್ 2ರಿಂದ 9ರವರೆಗೆ ಪ್ರಸಕ್ತ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ -3 ನಡೆಯಲಿದೆ.
97,933 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ರಾಜ್ಯದ 410 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲ್ಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
67,716 ಬಾಲಕರು, 30,217 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 459 ಮಂದಿ ಹಿಂದಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಮತ್ತೆ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಸುಸೂತ್ರವಾಗಿ ಪರೀಕ್ಷೆ ನಡೆಸಲು ಎಲ್ಲಾ ಸಿದ್ಧತೆ, ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ಕೇಂದ್ರದಲ್ಲಿಯೂ ಸಿಸಿಟಿವಿ ಮೂಲಕ ನಿಗಾ ವಹಿಸಲಾಗುವುದು. ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಸ್ಥಾನಿಕ ಜಾಗೃತ ದಳ, ಕೊಠಡಿ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದು, ಜಿಲ್ಲಾ ಮತ್ತು ತಾಲೂಕು ಹಂತದ ವಿಚಕ್ಷಣಾ ದಳಗಳನ್ನು ಆಯಾ ಜಿಲ್ಲಾಧಿಕಾರಿಗಳು ನಿಯೋಜಿಸಿದ್ದಾರೆ.