ತುಮಕೂರು: ಎಸ್ಎಸ್ಎಲ್ಸಿ ಪರೀಕ್ಷೆಯ ಆರಂಭದ ದಿನ ಕನ್ನಡ ವಿಷಯದ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಸೋಮವಾರ ಕನ್ನಡ ವಿಷಯದ ಪರೀಕ್ಷೆ ನಡೆದಿದ್ದು, ಚಿಕ್ಕನಾಯಕನಹಳ್ಳಿ ತಾಲೂಕು ಚಿಕ್ಕರಾಂಪುರ ಗ್ರಾಮದ ಸಿ.ಎಸ್. ಮೋಹನ್ ಕುಮಾರ್(16) ಮೃತಪಟ್ಟಿದ್ದಾರೆ. ಅವರು ಲೋಕಮ್ಮನಹಳ್ಳಿ ಗೇಟ್ ಸಮೀಪದ ಕಂಚಿರಾಯ ಶ್ರೀನಿವಾಸ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾರೆ. ತುರುವೇಕೆರೆ ಪಟ್ಟಣದ ಸರಸ್ವತಿ ಬಾಲಕಿಯರ ಪ್ರೌಢಶಾಲೆ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಮೋಹನ್ ಕುಮಾರ್ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅವರು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ.