
ಪಿಎಸ್ಐ ಪತ್ರಿಕೆ ಆಯ್ತು, ಈಗ ಎಸ್ಎಸ್ಎಲ್ಸಿ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ಬೆಳಕಿಗೆ ಬಂದಿದೆ. ಫಲಿತಾಂಶ ಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಏಪ್ರಿಲ್ 14 ರಂದು ಎಸ್ಎಸ್ಎಲ್ಸಿ ವಿಜ್ಞಾನ ಪರೀಕ್ಷೆ ನಡೆದಿದ್ದು, ಮಾಗಡಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಆರೋಪ ಕೇಳಿಬಂದಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧೀಕ್ಷಕರಿಗೆ ಡಿಡಿಪಿಐ ದೂರು ನೀಡಿದ್ದಾರೆ. ಪರೀಕ್ಷೆ ಆರಂಭಕ್ಕೂ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ. ರಂಗೇಗೌಡ ಎಂಬುವವರು ಕೆಂಪೇಗೌಡ ಪ್ರೌಢಶಾಲೆಯ ಸಿಬ್ಬಂದಿಯಾಗಿದ್ದು, ಇವರು ಪ್ರಶ್ನೆಪತ್ರಿಕೆಯನ್ನು ವಾಟ್ಸಾಪ್ ನಲ್ಲಿ ಶೇರ್ ಮಾಡಿದ್ದಾರೆ ಎನ್ನಲಾಗಿದೆ.
ಎಸ್ಎಸ್ಎಲ್ಸಿ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡನನ್ನು ಬಂಧಿಸಲಾಗಿದೆ. ರಾಮನಗರ ಜಿಲ್ಲೆ ಮಾಗಡಿಯಲ್ಲಿರುವ ಕೆಂಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡನನ್ನು ಮಾಗಡಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಡಿಡಿಪಿಐ ದೂರಿನ ಆಧಾರದಲ್ಲಿ ಬಂಧಿಸಲಾಗಿದೆ. ವಾಟ್ಸಾಪ್ ಗ್ರೂಪ್ ಗಳಿಗೆ ಪ್ರಶ್ನೆಪತ್ರಿಕೆ ಹಾಕಿದ್ದರು. ಏಪ್ರಿಲ್ 1ರಂದು ಬೆಳಗ್ಗೆ 10.30 ಕ್ಕೆ ಪ್ರಶ್ನೆಪತ್ರಿಕೆ ಸೆಂಡ್ ಮಾಡಿದ್ದರು. ಹೆಚ್.ಎಂ. ಮಾಗಡಿ ಎಂಬ ಗ್ರೂಪ್ ಗೆ ಪ್ರಶ್ನೆಪತ್ರಿಕೆಯನ್ನು ಗುಮಾಸ್ತ ರಂಗೇಗೌಡ ಹಾಕಿದ್ದರು.
ಈ ಗ್ರೂಪ್ನಲ್ಲಿ ಮುಖ್ಯ ಶಿಕ್ಷಕರು, ಶಿಕ್ಷಕರು ಇದ್ದಾರೆ. ಕೆಂಪೇಗೌಡ ಪ್ರೌಢಶಾಲೆಗೆ ಈ ಬಾರಿ ಶೇ. 100 ರಷ್ಟು ಫಲಿತಾಂಶ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 417, 418, 420, 201, 120ಬಿ, ಐಟಿ ಆಕ್ಟ್ 2000, ಕರ್ನಾಟಕ ಶಿಕ್ಷಣ ಕಾಯ್ದೆ 1983 ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬೇರೆಯವರು ಭಾಗಿಯಾಗಿರುವ ಶಂಕೆ ಇದ್ದು, ಇತರೆ ಆರೋಪಿಗಳಿಗಾಗಿ ಮಾಗಡಿ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ.