ಬೆಂಗಳೂರು: ಮಾರ್ಚ್ 25 ರಿಂದ ಆರಂಭವಾಗಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆ ಅಕ್ರಮ ತಡೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾರ್ಗಸೂಚಿ ಪ್ರಕಟಿಸಿದೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶ ದ್ವಾರದ ವಿರುದ್ಧ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಬೇಕು. ಸಾಮಾನ್ಯವಾಗಿ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ದ್ವಾರದ ಕಡೆ ಮುಖ ಮಾಡಿ ಕುಳಿತುಕೊಳ್ಳುತ್ತಾರೆ. ಹೀಗೆ ಕುಳಿತುಕೊಂಡರೆ ಅಕ್ರಮ ಎಸಗುವ ವಿದ್ಯಾರ್ಥಿಗಳು ವಿಚಕ್ಷಣ ದಳ ಬಂದ ತಕ್ಷಣ ಎಚ್ಚೆತ್ತುಕೊಳ್ಳುತ್ತಾರೆ. ಹಾಗಾಗಿ ಮಂಡಳಿಯ ಪ್ರವೇಶ ದ್ವಾರದ ವಿರುದ್ಧ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲು ತಿಳಿಸಿದೆ.
ವಿದ್ಯಾರ್ಥಿಗಳು ಬಯಲಿನಲ್ಲಿ ಕುಳಿತು ಪರೀಕ್ಷೆ ಬರೆಯಲು ಅವಕಾಶ ಇರಬಾರದು. ಅಹಿತಕರ ಘಟನೆ ನಡೆಯದಂತೆ ಡಿಡಿಪಿಐ ಕ್ರಮ ವಹಿಸಬೇಕು. ಸ್ವೀಕರಿಸಿದ ಪತ್ರಿಕೆಗಳನ್ನು ಅಲ್ಮೆರಾದಲ್ಲಿಟ್ಟುಕೊಳ್ಳಬೇಕು. ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳ ಬಂಡಲ್ ಗಳು ಇರುವ ಕೊಠಡಿಗೆ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಿದ್ದು, ಸೂಕ್ಷ್ಮ ಕೇಂದ್ರಗಳಿಗೆ ಬೇರೆ ಶಾಲೆ ಮುಖ್ಯ ಶಿಕ್ಷಕರನ್ನು ಮುಖ್ಯ ಅಧೀಕ್ಷಕರಾಗಿ ನೇಮಕ ಮಾಡಬೇಕು. ಎಸ್ಕಾರ್ಟ್ ನಲ್ಲಿ ಪ್ರಶ್ನೆ ಪತ್ರಿಕೆ ಸಾಗಿಸಬೇಕು ಎಂದು ಹೇಳಲಾಗಿದೆ.