ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಶಾಲೆಗಳಲ್ಲಿ ನಡೆಸುವ ಘಟಕ ಪರೀಕ್ಷೆಗಳಲ್ಲಿಯೂ ವೆಬ್ ಕಾಸ್ಟಿಂಗ್ ನಿಗಾ ವಹಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಎಲ್ಲಾ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳ ಐಪಿ ಸಂಖ್ಯೆಗಳನ್ನು ಮೇಲಾಧಿಕಾರಿಗಳಿಗೆ ಮುಖ್ಯ ಶಿಕ್ಷಕರು ನೀಡಬೇಕು. ಐಪಿ ಸಂಖ್ಯೆ ಬಳಸಿಕೊಂಡು ಡಿಡಿಪಿಐ ಕಚೇರಿ, ಬಿಇಓ ಕಚೇರಿ ಅಧಿಕಾರಿಗಳು, ಜಿಪಂ, ತಾಪಂ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕುಳಿತು ಪರೀಕ್ಷ ಚಟುವಟಿಕೆಗಳನ್ನು ವೀಕ್ಷಿಸಲಿದ್ದಾರೆ.
2023 -24 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಮೂಹಿಕ ನಕಲು ತಡೆಯಲು ವೆಬ್ ಕಾಸ್ಟಿಂಗ್ ವ್ಯವಸ್ಥೆ ಪರಿಚಯಿಸಲಾಗಿತ್ತು. ಮಕ್ಕಳಿಗೆ ಪರೀಕ್ಷಾ ಭಯ ದೂರ ಮಾಡಲು ಶಾಲಾ ಘಟಕ ಪರೀಕ್ಷೆಗಳಲ್ಲಿಯೂ ವೆಬ್ ಕಾಸ್ಟಿಂಗ್ ನಿಗಾ ವಹಿಸಲಾಗುವುದು.
ಸಿಸಿಟಿವಿ ಕ್ಯಾಮೆರಾ ಸೌಲಭ್ಯ ಇಲ್ಲದ ಶಾಲೆಗಳ ಮಕ್ಕಳು ಸಮೀಪದ ಶಾಲೆಗಳಿಗೆ ತೆರಳಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು. ಕಡಿಮೆ ಫಲಿತಾಂಶ ಪಡೆದ ವಿದ್ಯಾರ್ಥಿಗಳೊಂದಿಗೆ ಚರ್ಚಿಸಬೇಕು. ಅವರ ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ನಡೆಸಲಾಗುವ ಘಟಕ ಪರೀಕ್ಷೆಗಳನ್ನು ವೆಬ್ ಕಾಸ್ಟಿಂಗ್ ವ್ಯವಸ್ಥೆ ಮೂಲಕವೇ ನಡೆಸಲು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.