ಬೆಂಗಳೂರು: ಸೆಪ್ಟೆಂಬರ್ 27 ಮತ್ತು 28 ರಂದು ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ನಡೆಯಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಮುಖ್ಯ ಪರೀಕ್ಷೆಯ ರೀತಿಯಲ್ಲಿ ಪೂರಕ ಪರೀಕ್ಷೆಯನ್ನು ಕೂಡ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸುವುದರೊಂದಿಗೆ ಪರೀಕ್ಷೆಯನ್ನು ಸುಗಮವಾಗಿ ನಡೆಸಲಾಗುವುದು. ಮುಖ್ಯ ಪರೀಕ್ಷೆಯನ್ನು ಎರಡು ದಿನ ನಡೆಸಲಾಗಿದ್ದು, ಅದೇ ರೀತಿಯಲ್ಲಿ ಪೂರಕ ಪರೀಕ್ಷೆಯನ್ನು ಎರಡೇ ದಿನದಲ್ಲಿ ನಡೆಸಲಾಗುತ್ತದೆ. ಸೆಪ್ಟೆಂಬರ್ 27 ರಂದು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. 28 ರಂದು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷಾ ವಿಷಯದ ಪರೀಕ್ಷೆಗಳು ನಡೆಯಲಿದೆ.
ಎರಡೂ ದಿನ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಪರೀಕ್ಷೆಯ ಸಮಯ ನಿಗದಿಯಾಗಿದೆ. ಕೋರ್ ಸಬ್ಜೆಕ್ಟ್ ಗಳಿಗೆ ಪ್ರತಿ ವಿಷಯಕ್ಕೆ 40 ಅಂಕದಂತೆ ಒಟ್ಟು 3 ವಿಷಯದ 120 ಅಂಕಗಳ ಪ್ರಶ್ನೆಗಳ ಒಂದು ಪ್ರಶ್ನೆ ಪತ್ರಿಕೆ ಇರುತ್ತದೆ. ಬಹು ಆಯ್ಕೆಯ ಪ್ರಶ್ನೆಗಳಿಗೆ ಒಎಂಆರ್ ಶೀಟ್ ನಲ್ಲಿ ಸರಿಯಾದ ಉತ್ತರ ಗುರುತಿಸಬೇಕಿದೆ.