ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್ಎಸ್ಎಲ್ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಗಳ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದೆ.
ಏಪ್ರಿಲ್ 15ರಿಂದ ಏಕಕಾಲಕ್ಕೆ ಮೌಲ್ಯಮಾಪನ ಕಾರ್ಯ ಆರಂಭಿಸುವಂತೆ ಡಿಡಿಪಿಐ ಗಳಿಗೆ ಸೂಚನೆ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಪರೀಕ್ಷೆಗಳು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಡಿಡಿಪಿಐ ಗಳ ಕರ್ತವ್ಯ ಮತ್ತು ಜವಾಬ್ದಾರಿ ಬಗ್ಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ಅತ್ಯಂತ ಪಾರದರ್ಶಕ ಮತ್ತು ಎಚ್ಚರಿಕೆಯಿಂದ ಮೌಲ್ಯಮಾಪನ ಕಾರ್ಯ ನಡೆಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ಪ್ರತಿ ಮೌಲ್ಯಮಾಪನ ಕೇಂದ್ರಗಳಿಗೆ ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಸಕಾಲದಲ್ಲಿ ಮೌಲ್ಯಮಾಪಕರು ಕೇಂದ್ರಗಳಿಗೆ ಹಾಜರಾಗಬೇಕು. ಮೊಬೈಲ್ ಫೋನ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಲೋಕಸಭೆ ಚುನಾವಣೆಯ ಸಮಯವಾಗಿರುವುದರಿಂದ ರಾಜಕೀಯ ವ್ಯಕ್ತಿಗಳು, ಜನಪ್ರತಿನಿಧಿಗಳು ಮೌಲ್ಯಮಾಪನ ಕೇಂದ್ರಕ್ಕೆ ಪ್ರಚಾರಕ್ಕೆ ಭೇಟಿ ನೀಡುವ ಸಾಧ್ಯತೆ ಇರುತ್ತದೆ. ಅಂತಹ ಭೇಟಿಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಯಾವುದೇ ವ್ಯಕ್ತಿಗಳು ಕೇಂದ್ರಕ್ಕೆ ಪ್ರವೇಶಿಸುವುದು ಕಾನೂನುಬಾಹಿರವಾಗಿದೆ. ಮೌಲ್ಯಮಾಪನ ಕೇಂದ್ರಗಳ ಕಟ್ಟಡದ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಸ್ಥಳ ಎಂದು ಘೋಷಿಸಬೇಕು. ಯಾವುದೇ ಪ್ರಾಯೋಜಕರಿಂದ ಊಟ, ತಿಂಡಿ, ಕಾಫಿ, ಟೀ ಕೇಂದ್ರಗಳಿಗೆ ಪಡೆದುಕೊಳ್ಳಬಾರದು ಎಂದು ಹೇಳಲಾಗಿದೆ.