ಕಲಬುರಗಿ: ಕಲಬುರಗಿ, ಕೊಪ್ಪಳ ಜಿಲ್ಲೆಯ ಮೂರು ಪರೀಕ್ಷಾ ಕೇಂದ್ರಗಳ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ 16 ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಅಫಜಲಪುರ ತಾಲೂಕಿನ ಗೊಬ್ಬೂರ ಬಿ ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ಶಿಕ್ಷಕ ಸೇರಿ 16 ಶಿಕ್ಷಕರನ್ನು ಶಿಕ್ಷಣ ಇಲಾಖೆ ಸೇವೆಯಿಂದ ಅಮಾನತು ಮಾಡಿದೆ. ಏಪ್ರಿಲ್ 3 ರಂದು ಎಸ್.ಎಸ್.ಎಲ್.ಸಿ. ಗಣಿತ ವಿಷಯದ ಪರೀಕ್ಷೆ ನಡೆದಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಇಶಾ ಪಂತ್ ಬಂದೋಬಸ್ತ್ ಪರಿಶೀಲನೆಗೆ ತೆರಳಿದ್ದರು.
ಈ ವೇಳೆ ವಿದ್ಯಾರ್ಥಿಗಳು ಮೈಕ್ರೋ ಜೆರಾಕ್ಸ್ ಪುಸ್ತಕ ಮತ್ತು ಟಿಪ್ಪಣಿ ಚೀಟಿಗಳಿಂದ ಸಾಮೂಹಿಕ ನಕಲು ಮಾಡಿ ಅವುಗಳನ್ನು ಎಸೆದಿರುವುದು ಕಂಡುಬಂದಿತ್ತು. ಪರೀಕ್ಷಾ ಕೇಂದ್ರದಲ್ಲಿ ವ್ಯಕ್ತಿಯೊಬ್ಬರು ಮೈಕ್ರೋ ಜೆರಾಕ್ಸ್ ಪುಸ್ತಕ ಮತ್ತು ಚೀಟಿಗಳನ್ನು ಸುಟ್ಟು ಹಾಕಿದ್ದು, ಫೋಟೋ ಮತ್ತು ವಿಡಿಯೋ ಚಿತ್ರೀಕರಣಗಳನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿತ್ತು.
ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧೀಕ್ಷಕಿ ಇಶಾ ಪಂತ್ ಅವರು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದಾಗ ಪರೀಕ್ಷಾ ಕೇಂದ್ರದ ಸುತ್ತ ಜನರು ಇದ್ದರು. ಕೊಠಡಿ ಕಿಟಕಿಗಳ ಬಳಿ ನಕಲು ಚೀಟಿಗಳು, ಟಿಪ್ಪಣಿ ಚೀಟಿಗಳು ಕಂಡುಬಂದಿದ್ದವು. ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಇದ್ದರೂ ಸಾರ್ವಜನಿಕರು ನಿಷೇಧಿತ ಪ್ರದೇಶದಲ್ಲಿ ಓಡಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದ ಅಧೀಕ್ಷಕ, ಕಸ್ಟೋಡಿಯನ್, ಜಾಗೃತದಳ ಸಿಬ್ಬಂದಿ, ಕೊಠಡಿ ಮೇಲ್ವಿಚಾರಕರು ಸೇರಿ 16 ಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.