ಬೆಂಗಳೂರು: ಕೊರೋನಾ ಸೋಂಕಿನ ಕಾರಣ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಬೇಕೇ? ಬೇಡವೇ? ಎನ್ನುವ ಚರ್ಚೆ ಮುಂದುವರೆದಿದೆ.
ಈ ನಡುವೆ 2021 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸುವ ಕುರಿತಾಗಿಯೂ ಚರ್ಚೆ ಆರಂಭವಾಗಿದ್ದು, ವೇಳಾಪಟ್ಟಿ ಸಿದ್ಧಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಸೂಚನೆ ನೀಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶೀಘ್ರವೇ ಉನ್ನತ ಮಟ್ಟದ ಸಭೆ ನಡೆಸಿ ಎಸ್ಎಸ್ಎಲ್ಸಿ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ನಿಗದಿ ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಡಿಸೆಂಬರ್ ಮೂರನೇ ವಾರದಲ್ಲಿ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಶೇಕಡ 30 ರಷ್ಟು ಪಠ್ಯ ಕಡಿತ ಮಾಡಲಾಗಿದ್ದು, ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ ಮತ್ತಷ್ಟು ಪಠ್ಯ ಕಡಿತಗೊಳಿಸುವ ಸಾಧ್ಯತೆ ಇದೆ. ಶಾಲೆಯೇ ಆರಂಭವಾಗಿಲ್ಲ. ಪಠ್ಯದ ಬಗ್ಗೆಯೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ವೇಳಾಪಟ್ಟಿ ಸಿದ್ಧಪಡಿಸಲು ಮುಂದಾಗಿರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಆನ್ಲೈನ್ ತರಗತಿ ಆಧಾರದ ಮೇಲೆ ಪರೀಕ್ಷೆ ನಡೆಸಿದರೆ ಮಕ್ಕಳಿಗೆ ಕಷ್ಟವಾಗುತ್ತದೆ ಎನ್ನುವ ಅಭಿಪ್ರಾಯ ಕೇಳಿಬಂದಿದ್ದು, ಇವೆಲ್ಲದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.