ಈ ಬಾರಿಯ 10ನೇ ತರಗತಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಪೂರಕ ಪರೀಕ್ಷೆಗೆ ನೋಂದಣಿ, ಉತ್ತರ ಪತ್ರಿಕೆಗಳ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.
ಈ ಕುರಿತಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದ್ದು, ಪೂರಕ ಪರೀಕ್ಷೆಗೆ ನೋಂದಾಯಿಸಲು ಮತ್ತು ಶುಲ್ಕ ಪಾವತಿಸಲು ಮೇ 22 ರವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹಾಗೆಯೇ ಉತ್ತರ ಪತ್ರಿಕೆಗಳ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಮೇ 25 ರವರೆಗೆ ಅವಧಿ ವಿಸ್ತರಿಸಲಾಗಿದ್ದು, ಶುಲ್ಕ ಪಾವತಿಸಲು ಮೇ 26 ಅಂತಿಮ ದಿನವಾಗಿದೆ.
ಇನ್ನು ಮೇ 19 ರಿಂದ ಮೇ 22 ರ ವರೆಗೆ ಆನ್ಲೈನ್ ನಲ್ಲಿ ವಿದ್ಯಾರ್ಥಿಗಳ ವಿವರ ಅಪ್ಲೋಡ್ ಮಾಡಲು ಹಾಗೂ ಆನ್ಲೈನ್ ನಲ್ಲಿ ಬ್ಯಾಂಕ್ ಚಲನ್ ಜನರೇಟ್ ಮಾಡಲು ಸಾಧ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ, ಆಯ್ಕೆ ಮಾಡಿಕೊಂಡ ವಿಷಯ, ಭಾವಚಿತ್ರ ಮತ್ತು ಅಭ್ಯರ್ಥಿಯ ಸಹಿ ದೃಢೀಕರಿಸಿ ಪರೀಕ್ಷಾ ಶುಲ್ಕವನ್ನು ಈ ಹಿಂದಿನಂತೆ ಮಂಡಳಿಯ ನೆಫ್ಟ್ ಚಲನ್ ನಲ್ಲಿ ಭರ್ತಿ ಮಾಡಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಶುಲ್ಕ ಜಮೆ ಮಾಡಬೇಕು ಎಂದು ತಿಳಿಸಲಾಗಿದ್ದು, ಸಮಸ್ಯೆಗಳಾದರೆ ಮುಖ್ಯ ಶಿಕ್ಷಕರೇ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಸಲಾಗಿದೆ.