ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್.ಎಸ್.ಎಲ್.ಸಿ ಉತ್ತರ ಪತ್ರಿಕೆ ಮೌಲ್ಯಮಾಪಕರು ಮತ್ತು ಸಿಬ್ಬಂದಿಗಳ ಸಂಭಾವನೆ ಹೆಚ್ಚಿಸಿ ಆದೇಶ ಹೊರಡಿಸಿದೆ.
ಜಂಟಿ ಮುಖ್ಯ ಪರೀಕ್ಷಕರ ಸಂಭಾವನೆ 6,924 ರೂಪಾಯಿಗಳಿಂದ 7,270 ರೂಪಾಯಿಗಳಿಗೆ, ಉಪ ಮುಖ್ಯ ಪರೀಕ್ಷಕರ ಸಂಭಾವನೆಯನ್ನು 5,204 ರೂಪಾಯಿಗಳಿಂದ 5,464 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಅಲ್ಲದೆ ಪ್ರತಿ ಉತ್ತರ ಪತ್ರಿಕೆ ಮೌಲ್ಯಮಾಪನ ದರವನ್ನು ಒಂದು ರೂಪಾಯಿ ಹೆಚ್ಚಿಸಲಾಗಿದೆ. ಪ್ರಥಮ ಭಾಷೆ ಉತ್ತರ ಪತ್ರಿಕೆ ಮೌಲ್ಯಮಾಪನ ದರ 23 ರೂಪಾಯಿ, ದ್ವಿತೀಯ ಮತ್ತು ತೃತೀಯ ಭಾಷೆ ಮೌಲ್ಯಮಾಪನ ದರ 21 ರೂಪಾಯಿ ಹಾಗೂ ಐಚ್ಛಿಕ ವಿಷಯಗಳ ಮೌಲ್ಯಮಾಪನ ದರ 21 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.
ಇದರ ಜೊತೆಗೆ ದಿನ ಭತ್ಯೆಯನ್ನೂ ಸಹ ಹೆಚ್ಚಳ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುವವರ ದಿನಭತ್ಯೆ 596 ರೂಪಾಯಿ, ಇತರೆ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುವವರ ದಿನಭತ್ಯೆ 469 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ 4,515 ರೂಪಾಯಿ, ಕ್ಯಾಂಪ್ ಸಹಾಯಕರು 1,260 ರೂಪಾಯಿ ಹಾಗೂ ಡಿ ಗ್ರೂಪ್ ಸಿಬ್ಬಂದಿ ಭತ್ಯೆಯನ್ನು 630 ರೂಪಾಯಿಗಳಿಗೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.