ಕೊಲ್ಕೊತ್ತಾ: ಎಸ್.ಎಸ್.ಸಿ. ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಂಧಿಸಲಾದ ತೃಣಮೂಲ ಕಾಂಗ್ರೆಸ್ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮತ್ತೊಂದು ಮನೆಯಿಂದ ಜಾರಿ ನಿರ್ದೇಶನಾಲಯ ಭಾರಿ ಪ್ರಮಾಣದ ಹಣ ವಶಪಡಿಸಿಕೊಂಡಿದೆ.
ಶಾಲಾ ಸೇವಾ ಆಯೋಗದ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಇಡಿ ಶನಿವಾರ ಟಿಎಂಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಟರ್ಜಿ ಅವರನ್ನು ಬಂಧಿಸಿತ್ತು.
ಅರ್ಪಿತಾ ಮುಖರ್ಜಿ ನಿವಾಸಕ್ಕೆ ನೋಟು ಎಣಿಕೆ ಯಂತ್ರಗಳನ್ನು ತಂದ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿ ವಶಪಡಿಸಿಕೊಂಡು ಸುಮಾರು 20 ಕೋಟಿ ರೂ. ಎಣಿಸಲಾಗಿತ್ತು. ನಗದು ಹೊರತುಪಡಿಸಿ ಹೆಚ್ಚಿನ ಆಸ್ತಿ ದಾಖಲೆಗಳನ್ನು ಕೂಡ ಸಂಸ್ಥೆ ವಶಪಡಿಸಿಕೊಂಡಿದೆ. ಇಂದು ಬಂಧಿತ ಅರ್ಪಿತಾಗೆ ಸೇರಿದ ಮತ್ತೊಂದು ಫ್ಲ್ಯಾಟ್ ನಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುವಾಗ ಕಂಡು ಬಂದ ಭಾರೀ ಪ್ರಮಾಣದ ನಗದು ಜಪ್ತಿ ಮಾಡಲಾಗಿದೆ.