ದಾವಣಗೆರೆ: ಸಂವಿಧಾನವೇ’ ನಮ್ಮ ರಾಷ್ಟ್ರದ ಸರ್ವೋಚ್ಚ ಕಾನೂನು, ಅದಕ್ಕೆ ಎಲ್ಲರೂ ಗೌರವಿಸಬೇಕು ಮತ್ತು ಅದರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹೇಳಿದರು.
ಭಾನುವಾರ ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಪಥಸಂಚಲನದಲ್ಲಿ ವಿವಿಧ ತುಕುಡಿಗಳಿಂದ ಗೌರವ ವಂದನೆ ಸ್ವೀಕರಿಸಿ ತಮ್ಮ ಸಂದೇಶದಲ್ಲಿ ಮಾತನಾಡಿದರು.
ಬುದ್ಧ, ಬಸವ, ಅಂಬೇಡ್ಕರ್ ಅವರ ಸದಾಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯ ತುಂಬಿರುವುದರಿಂದ ರೈತಾಪಿ ವರ್ಗದಲ್ಲಿ ಹರ್ಷ ಮನೆಮಾಡಿದೆ. ರೈತರು ಬೇಸಿಗೆ ಬೆಳೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಜನಸಾಮಾನ್ಯರೆಲ್ಲರಿಗೂ ಮರಳುಲಭ್ಯವಾಗುವಂತೆ ಮಾಡಲು ನದಿಪಾತ್ರದಲ್ಲಿ 24 ಮರಳಿನ ಬ್ಲಾಕ್ ಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 4 ಬ್ಲಾಕ್ ಗಳನ್ನು ಸರ್ಕಾರಿ ಕಾಮಗಾರಿಗಳಿಗೆ ಮರಳು ನೀಡಲು ಮೀಸಲಿರಿಸಿ, 20 ಬ್ಲಾಕ್ ಗಳಲ್ಲಿ ಜನರಿಗೆ ನಿಗದಿತ ದರದಲ್ಲಿ ಮರಳು ಸಿಗುವಂತೆ ಮಾಡಲು ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆ ಕೆಲವೇ ಕೆಲವೇ ದಿನಗಳಲ್ಲಿ ಪೂರ್ಣಗೊಂಡು ಜನರಿಗೆ ಮರಳು ಲಭ್ಯವಾಗಲಿದೆ ಎಂದರು.
ಈ ವೇಳೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಮೇಯರ್ ಚಮನ್ ಸಾಬ್ ಕೆ., ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಉಪಮೇಯರ್ ಸೋಗಿ ಶಾಂತಕುಮಾರ್, ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ರವಿಕಾಂತೇಗೌಡ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ., ಎಸ್ಪಿ ಉಮಾ ಪ್ರಶಾಂತ್, ಜಿ.ಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಮತ್ತಿತರರಿದ್ದರು.