
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರ ಸೆಪ್ಟೆಂಬರ್ 7ರಂದು ವಿಶ್ವದಾದ್ಯಂತ ತೆರೆ ಕಾಣುತ್ತಿದ್ದು, ‘ಪಠಾಣ್’ ನಂತರ ಬಿಡುಗಡೆಯಾಗುತ್ತಿರುವ ಈ ಚಿತ್ರದ ಕುರಿತು ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿದೆ. ಈ ಚಿತ್ರದ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
‘ಜವಾನ್’ ಚಿತ್ರ ಬಿಡುಗಡೆಯಾಗಲು ಇನ್ನೆರಡು ದಿನಗಳು ಇರುವಂತೆಯೇ ನಟ ಶಾರುಖ್ ಖಾನ್, ಇಂದು ಬೆಳಿಗ್ಗೆಯೇ ತಮ್ಮ ಪುತ್ರಿ ಸುಹಾನ ಖಾನ್ ಜೊತೆ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭೇಟಿ ನೀಡಿ ವಿಶೇಷ ದರ್ಶನ ಪಡೆದಿದ್ದಾರೆ. ಈ ವೇಳೆ ಶಾರುಖ್ ಖಾನ್ ಅವರನ್ನು ನೋಡಿದ ಅಭಿಮಾನಿಗಳು ಹರ್ಷೋದ್ಗಾರ ಮಾಡಿದ್ದು, ಅವರತ್ತ ಶಾರುಖ್ ಕೈ ಬೀಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾರುಖ್ ಖಾನ್ ಈ ಮೊದಲು ಜಮ್ಮುವಿಗೆ ತೆರಳಿ ವೈಷ್ಣೋದೇವಿ ದರ್ಶನ ಪಡೆದಿದ್ದು, ಇದೀಗ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪುತ್ರಿ ಸುಹಾನ ಮಾತ್ರವಲ್ಲದೆ ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದಡ್ಲಾನಿ ಸಹ ಇದ್ದರು. ಇವರುಗಳಿಗೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ನಯನತಾರಾ ಹಾಗೂ ಅವರ ಪತಿ ವಿಜ್ಞೇಶ್ ಶಿವನ್ ಸಾಥ್ ನೀಡಿದ್ದರು.