ಸವರ್ಣಿಯರು ಹಾಗೂ ದಲಿತರ ನಡುವಿನ ಸಂಘರ್ಷದಿಂದಾಗಿ ಕಳೆದ 18 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಜಕ್ಕನಹಳ್ಳಿ ಗ್ರಾಮದ ಚಾಮುಂಡೇಶ್ವರಿ ದೇಗುಲದ ಬಾಗಿಲನ್ನು ಬುಧವಾರದಂದು ಭಕ್ತರಿಗಾಗಿ ತೆರೆಯಲಾಗಿದ್ದು, ಎರಡೂ ಸಮುದಾಯದವರು ದರ್ಶನ ಪಡೆದಿದ್ದಾರೆ.
ದೇಗುಲದ ಬಾಗಿಲು ತೆಗೆಯುವ ಮುನ್ನ ಉಭಯ ಸಮುದಾಯಗಳ ಮುಖಂಡರೊಡನೆ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಗಿದ್ದು, ಇದರಲ್ಲಿ ತಹಶೀಲ್ದಾರ್ ಶ್ವೇತಾ ಎನ್. ರವೀಂದ್ರ, ಸರ್ಕಲ್ ಇನ್ಸ್ಪೆಕ್ಟರ್ ವಿವೇಕಾನಂದ ಮೊದಲಾದವರು ಪಾಲ್ಗೊಂಡಿದ್ದರು.
ಚರ್ಚೆ ಬಳಿಕ ಉಭಯ ಸಮುದಾಯಗಳ ಮುಖಂಡರು ದೇಗುಲದ ಬಾಗಿಲು ತೆರೆಯಲು ತಮ್ಮ ಒಪ್ಪಿಗೆ ಸೂಚಿಸಿದ್ದು, ಬಳಿಕ ಬೀಗ ತೆರೆದು ಪೂಜೆ ಸಲ್ಲಿಸಲಾಯಿತು. ಮುಂದಿನ ದಿನಗಳಲ್ಲಿ ಶಾಂತಿಯುತವಾಗಿ ನಡೆದುಕೊಳ್ಳುವ ಕುರಿತು ಎರಡೂ ಸಮುದಾಯಗಳ ಮುಖಂಡರು ಸಮ್ಮತಿಸಿದ್ದಾರೆ.
ದೇಗುಲದ ಬಾಗಿಲು ತೆರೆಯುತ್ತಿದ್ದಂತೆ ಮಹಿಳೆಯರು, ಮಕ್ಕಳು, ಯುವಕರು ಸರದಿ ಸಾಲಿನಲ್ಲಿ ದೇವಿಯ ದರ್ಶನ ಪಡೆದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.