ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆ ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಬೈ ಎಲೆಕ್ಷನ್ನಲ್ಲಿ ಗೆಲ್ಲಬೇಕೆಂಬ ಜಿದ್ದಿನಲ್ಲಿ ರಾಜಕೀಯ ಮುಖಂಡರು ಪರಸ್ಪರ ಕೆಸರೆರೆಚಾಟದಲ್ಲಿ ಮುಳುಗಿದ್ದಾರೆ. ಈ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಇರುವವರಿಗೆ ಬಹಳ ತಾಳ್ಮೆ ಇರಬೇಕು ಎಂದು ಹೇಳಿದ್ರು.
ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಆಡಳಿತ ಪಕ್ಷದಷ್ಟೇ ವಿರೋಧ ಪಕ್ಷಗಳಿಗೂ ಅವರದ್ದೇ ಆದ ಜವಾಬ್ದಾರಿಗಳು ಇರುತ್ತವೆ. ಸಿದ್ದರಾಮಯ್ಯ ಉದ್ವೇಗದಿಂದ ವಿವೇಚನೆ ಕಳೆದುಕೊಂಡು ಮಾತನಾಡುತ್ತಿದ್ದಾರೆ. ರಾಷ್ಟ್ರಮಟ್ಟದ ರಾಜಕಾರಣವನ್ನು ಸಿದ್ದರಾಮಯ್ಯ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಸಿದ್ದರಾಮಯ್ಯ ಮಾತಿನಿಂದ ಆಡಳಿತ ಪಕ್ಷದವರೂ ತಾಳ್ಮೆ ಕಳೆದುಕೊಳ್ಳುತ್ತಾರೆ. ವಿರೋಧ ಪಕ್ಷ ನಾಯಕನ ಭಾಷಣ ಕೇಳಿದ್ದೀರಾ..? ಅದನ್ನು ಯಾರಾದರೂ ಸಹಿಸುತ್ತಾರಾ ಎಂದು ಪ್ರಶ್ನೆ ಮಾಡಿದರು.
ಪ್ರತಿಪಕ್ಷ ನಾಯಕನಾದವನು ತನ್ನ ಜವಾಬ್ದಾರಿ ಅರಿತು ಸರ್ಕಾರದ ವೈಫಲ್ಯಗಳನ್ನು ಸರಿಯಾಗಿ ಎತ್ತಿ ತೋರಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸಿದ್ದರಾಮಯ್ಯ ಅವಹೇಳನಕಾರಿ ಮಾತನಾಡುತ್ತಿದ್ದಾರೆ. ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಎಷ್ಟು ಸರಿ..? ಎಂದು ಕೇಳಿದ್ರು.
ತಾಲಿಬಾನಿಗಳ ಬಗ್ಗೆ ಮಾತನಾಡೋದು ಸರಿಯಲ್ಲ. ಇಡೀ ರಾಷ್ಟ್ರದಲ್ಲಿ ಯಾರೂ ಮಾತಾಡಲ್ಲ. ನಾನು ಕೇಂದ್ರದ ಬಳಿ ಮನವಿ ಮಾಡುವುದು ಇಷ್ಟೇ, ಸಿದ್ದರಾಮಯ್ಯರನ್ನು ಒಂದು ತಿಂಗಳು ತಾಲಿಬಾನ್ ಗಳ ಬಳಿ ಕಳುಹಿಸಿಕೊಡಿ. ಒಂದು ತಿಂಗಳು ಅಫ್ಘಾನಿಸ್ತಾನದ ಪರಿಸ್ಥಿತಿ ನೋಡಿಕೊಂಡು ಬರಲಿ. ಬಳಿಕ ಮಾತನಾಡಲಿ ಎಂದು ಹೇಳಿದ್ರು.