
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವೂ ಒಂದು. ಇಲ್ಲಿ ನೆಲೆಸಿರುವ ಮಂಜುನಾಥ ಅಭಯದಾತ. 700 ವರ್ಷಗಳ ಇತಿಹಾಸ ಹೊಂದಿರುವ ಧರ್ಮಸ್ಥಳ ನೇತ್ರಾವತಿ ನದಿ ದಂಡೆಯಲ್ಲಿದೆ. ಮಂಜುನಾಥ ಸ್ವಾಮಿಯ ವಿಗ್ರಹವನ್ನು ಮಂಗಳೂರಿನ ಕದ್ರಿಯಿಂದ ವಾದಿರಾಜರು ಇಲ್ಲಿ ತಂದು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ.
ಈ ಕ್ಷೇತ್ರ ದಾನ ಧರ್ಮಕ್ಕೆ ಪ್ರಸಿದ್ಧವಾಗಿರುವುದರೊಂದಿಗೆ ಭಕ್ತರಿಗೆ ನೈತಿಕ ಸಾಂಸ್ಕೃತಿಕ ಕೇಂದ್ರವಾಗಿಯೂ ಆಕರ್ಷಿಸುತ್ತದೆ. ಜೈನ ಸಮುದಾಯದವರಿಂದ ನಡೆಸಲ್ಪಡುವ ಈ ದೇವಾಲಯದಲ್ಲಿ ಪೂಜೆ ವಿಧಿ ವಿಧಾನಗಳು ಬ್ರಾಹ್ಮಣ ಸಂಪ್ರದಾಯದಂತೆ ನಡೆದು ಬರುತ್ತಿರುವುದು ವಿಶೇಷ. ಹೆಗ್ಗಡೆ ಮನೆತನದವರು ಇಲ್ಲಿ ಧರ್ಮದರ್ಶಿಗಳಾಗಿ ತಮ್ಮ ಅಮೂಲ್ಯ ಸೇವೆ ನೀಡುತ್ತಾ ಬಂದಿದ್ದಾರೆ.
ಇದರೊಂದಿಗೆ ಧರ್ಮಸ್ಥಳದಲ್ಲಿ ಚಂದ್ರನಾಥ ಬಸದಿ, ಬಾಹುಬಲಿ ಪ್ರತಿಮೆ, ಜಮಾ ಉಗ್ರಾಣ, ವಿಮಾನ ವೀಕ್ಷಣಾ ಸ್ಥಳ, ಮಂಜೂಷಾ ಸಂಗ್ರಹಾಲಯ, ಲಲಿತೋದ್ಯಾನ ಮತ್ತಿತರ ಹಲವು ಪ್ರೇಕ್ಷಣೀಯ ಸ್ಥಳಗಳಿವೆ.
ಇಲ್ಲಿಗೆ ತೆರಳಲು ಬೆಂಗಳೂರು, ಮಂಗಳೂರಿನಿಂದ ಸಾಕಷ್ಟು ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಲಭ್ಯವಿವೆ. ಬೆಂಗಳೂರಿನಿಂದ 298 ಕಿ.ಮೀ. ಮತ್ತು ಮಂಗಳೂರಿನಿಂದ 75 ಕಿ.ಮೀ. ದೂರದಲ್ಲಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ದರ್ಶನವಿದ್ದು, ಭಕ್ತಾದಿಗಳಿಗೆ ಊಟದ ವ್ಯವಸ್ಥೆಯೂ ಇದೆ.