ಕೊಲಂಬೊ: ಶ್ರೀಲಂಕಾದಲ್ಲಿ ಆಹಾರಕ್ಕೆ ಹಾಹಾಕಾರ ಉಂಟಾಗಿದ್ದು, ಶ್ರೀಲಂಕಾ ಸರ್ಕಾರ ಆಹಾರದ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಅಗತ್ಯ ಆಹಾರ ಪದಾರ್ಥಗಳನ್ನು ಸಂಗ್ರಹಣೆ ಮಾಡುವಂತಿಲ್ಲ. ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಣೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಂತಹವರನ್ನು ಬಂಧನ ಮಾಡಲಾಗುವುದು ಎಂದು ಶ್ರೀಲಂಕಾ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ಆದೇಶ ಹೊರಡಿಸಿದ್ದಾರೆ.
ಆಹಾರ ಪದಾರ್ಥಗಳ ದರ ಕೈಗೆಟುಕದಂತಾಗಿದೆ. ಈ ಕಾರಣ ಶ್ರೀಲಂಕಾ ಆಹಾರ, ಆರ್ಥಿಕ ತುರ್ತುಸ್ಥಿತಿಯನ್ನು ಘೋಷಿಸಿದೆ, ದಕ್ಷಿಣ ಏಷ್ಯಾದ ಈ ದೇಶದ ಕರೆನ್ಸಿಯ ಮೌಲ್ಯವು ತೀವ್ರವಾಗಿ ಕುಸಿದ ನಂತರ ಆಹಾರದ ಬೆಲೆಯಲ್ಲಿ ಏರಿಕೆಯಾಗಿದೆ.
ಅಕ್ಕಿ ಮತ್ತು ಸಕ್ಕರೆ ಸೇರಿದಂತೆ ಮೂಲಭೂತ ಆಹಾರ ಪದಾರ್ಥಗಳ ಪೂರೈಕೆಯನ್ನು ನಿಯಂತ್ರಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಶ್ರೀಲಂಕಾ ರೂಪಾಯಿ ಈ ವರ್ಷ ಯುಎಸ್ ಡಾಲರ್ ಎದುರು ಶೇ 7.5 ರಷ್ಟು ಕುಸಿದಿದೆ. ವ್ಯಾಪಕವಾದ ತುರ್ತು ಕ್ರಮ ಜಾರಿಗೆ ಬಂದಿದ್ದು, ಹಿಂದಿನ ಸೇನಾ ಜನರಲ್ ಅವರನ್ನು ಅಗತ್ಯ ಸೇವೆಗಳ ಆಯುಕ್ತರನ್ನಾಗಿ ನೇಮಿಸಿದೆ, ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಹೊಂದಿರುವ ಸ್ಟಾಕ್‌ಗಳನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ನೀಡಲಾಗಿದೆ.
ಅಧಿಕೃತ ಅಧಿಕಾರಿಗಳು ಅಗತ್ಯ ಆಹಾರ ಪದಾರ್ಥಗಳ ದಾಸ್ತಾನು ಖರೀದಿಸುವ ಮೂಲಕ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಅಗತ್ಯ ಆಹಾರ ಪದಾರ್ಥಗಳನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ದ್ವೀಪ ರಾಷ್ಟ್ರದ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ತಿಳಿಸಿದ್ದಾರೆ.