ಶ್ರೀಲಂಕಾದ ಇಬ್ಬರು ಸ್ಟಾರ್ ಕ್ರಿಕೆಟಿಗರಾದ ನಿರೋಷನ್ ಡಿಕ್ವೆಲ್ಲಾ ಮತ್ತು ಕುಸಲ್ ಮೆಂಡಿಸ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷ್ಯವಾಗಿದೆ. ಬಯೋ ಬಬಲ್ ನಿಯಮ ಮುರಿದಿರುವ ಆಟಗಾರರು, ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದಾರೆ. ವಿಡಿಯೋದಲ್ಲಿ ಆಟಗಾರರ ಕೈನಲ್ಲಿ ಮಾದಕ ದ್ರವ್ಯವಿದ್ದಂತೆ ಕಾಣ್ತಿದೆ.
ಕೈನಲ್ಲಿರುವ ವಸ್ತುವನ್ನು ಇಬ್ಬರು ಆಟಗಾರರು ಕದ್ದುಮುಚ್ಚಿ ಬಳಸುವ ಪ್ರಯತ್ನ ನಡೆಸಿದ್ದಾರೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಕೈನಲ್ಲಿರುವ ವಸ್ತು ಏನು ಎಂಬುದು ಸ್ಪಷ್ಟವಾಗಿ ಕಾಣ್ತಿಲ್ಲ. ಕೆಲ ಸಾಮಾಜಿಕ ಬಳಕೆದಾರರು ಇದು ಸಿಗರೇಟ್ ಎಂದ್ರೆ ಮತ್ತೆ ಕೆಲವರು ಡ್ರಗ್ಸ್ ಎನ್ನುತ್ತಿದ್ದಾರೆ.
ತಂಡದ ಕಳಪೆ ಪ್ರದರ್ಶನಕ್ಕೆ ಇದು ಕಾರಣವಾಗಿದೆ. ಈ ಬಗ್ಗೆ ಸೂಕ್ತ ವಿಚಾರಣೆ ನಡೆಯಬೇಕೆಂದು ಕೆಲ ಬಳಕೆದಾರರು ಬೇಡಿಕೆಯಿಟ್ಟಿದ್ದಾರೆ. ಇಂಗ್ಲೆಂಡ್ ಪ್ರವಾಸದ ವೇಳೆ ಬಯೋ ಬಬಲ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಶ್ರೀಲಂಕಾ ಕ್ರಿಕೆಟ್ ಡಿಕ್ವೆಲ್ಲಾ ಮತ್ತು ಕುಸಲ್ ಮೆಂಡಿಸ್ ವಿರುದ್ಧ ತನಿಖೆ ಆರಂಭಿಸಿದೆ.
ಶನಿವಾರ ಕೊನೆಗೊಂಡ 3 ಟಿ-20 ಸರಣಿಯನ್ನು ಶ್ರೀಲಂಕಾ ಕೈಚೆಲ್ಲಿದೆ. 2020ರಿಂದ ಈವರೆಗೆ ಶ್ರೀಲಂಕಾ ಐದನೇ ಟಿ-20 ಸರಣಿಯನ್ನು ಸೋತಿದೆ. ಇಂಗ್ಲೆಂಡ್ ವಿರುದ್ಧ ಜೂನ್ 29ರಿಂದ ಮೂರು ಏಕದಿನ ಸರಣಿ ಶುರುವಾಗಲಿದೆ.