ಟಿ20 ವಿಶ್ವ ಕಪ್ ಗಾಗಿ ಆಸ್ಟ್ರೇಲಿಯಾಗೆ ತೆರಳಿದ್ದ ಶ್ರೀಲಂಕಾ ತಂಡದ ಆಟಗಾರರೊಬ್ಬರು ಈಗ ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಸಿಡ್ನಿ ಪೊಲೀಸರು 31 ವರ್ಷದ ಶ್ರೀಲಂಕಾ ಕ್ರಿಕೆಟರ್ ಧನುಷ್ಕಾ ಗುಣತಿಲಕನನ್ನು ಬಂಧಿಸಿದ್ದು, ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಶ್ರೀಲಂಕಾ ತಂಡ ಆತನನ್ನು ಆಸ್ಟ್ರೇಲಿಯಾದಲ್ಲಿಯೇ ಬಿಟ್ಟು ವಾಪಾಸ್ ತೆರಳಿದೆ.
ನವೆಂಬರ್ 2ರಂದು ಅತ್ಯಾಚಾರ ಪ್ರಕರಣ ನಡೆದಿದೆ ಎನ್ನಲಾಗಿದ್ದು, 29 ವರ್ಷದ ಮಹಿಳೆಯ ದೂರನ್ನು ಆಧರಿಸಿ ಸಿಡ್ನಿ ಪೊಲೀಸರು ಧನುಷ್ಕ ಗುಣತಿಲಕನನ್ನು ಬಂಧಿಸಿದ್ದಾರೆ. ಅಲ್ಲದೆ ವಿಚಾರಣೆಯನ್ನು ತೀವ್ರಗೊಳಿಸಿದ್ದು, ಒಂದೊಮ್ಮೆ ಕ್ರಿಕೆಟರ್ ವಿರುದ್ಧದ ಆರೋಪ ಸಾಬೀತಾದರೆ ಕಠಿಣ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಟಿ20 ವಿಶ್ವಕಪ್ ಗಾಗಿ ಶ್ರೀಲಂಕಾ ತಂಡದ ಜೊತೆ ಬಂದಿದ್ದ ಧನುಷ್ಕ ಗುಣತಿಲಕ ಮೊದಲ ಸುತ್ತಿನಲ್ಲಿ ನಮೀಬಿಯಾ ವಿರುದ್ಧ ಪಂದ್ಯವನ್ನಾಡಿದ್ದು ಯಾವುದೇ ರನ್ ಗಳಿಸದೆ ಔಟ್ ಆಗಿದ್ದರು. ಬಳಿಕ ಗಾಯಗೊಂಡಿದ್ದ ಅವರನ್ನು ಇತರೆ ಪಂದ್ಯಗಳಿಂದ ಹೊರಗಿಡಲಾಗಿತ್ತು.
ಆಸ್ಟ್ರೇಲಿಯಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಧನುಷ್ಕ ಗುಣತಿಲಕ ಆನ್ಲೈನ್ ಡೇಟಿಂಗ್ ವೆಬ್ಸೈಟ್ ಮೂಲಕ ಮಹಿಳೆಯನ್ನು ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ. ಬಳಿಕ ಆಕೆ ಮೇಲೆ ಅತ್ಯಾಚಾರವೆಸಗಿದ್ದು, ಈಗ ಬಂಧನಕ್ಕೊಳಗಾಗಿದ್ದಾನೆ. ಇಂಗ್ಲೆಂಡ್ ವಿರುದ್ಧದ ಪಂದ್ಯ ಸೋತ ಬಳಿಕ ಶ್ರೀಲಂಕಾ ತಂಡ ಟೂರ್ನಿಯಿಂದ ಹೊರ ಬಿದ್ದಿದ್ದು ಹೀಗಾಗಿ ವಾಪಸ್ ತನ್ನ ದೇಶಕ್ಕೆ ತೆರಳಿದೆ.