ನವದೆಹಲಿ: ಸತ್ಸಂಗದ ಸಂಸ್ಥಾಪಕ ಶ್ರೀ ಶ್ರೀ ಠಾಕೂರ್ ಅನುಕುಲಚಂದ್ರ ಅವರನ್ನು ‘ಪರಮಾತ್ಮ’ ಎಂದು ಘೋಷಿಸಲು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲರಿಗೆ ಸುಪ್ರೀಮ್ ಕೋರ್ಟ್ ಛೀಮಾರಿ ಹಾಕಿ ಭಾರಿ ದಂಡ ವಿಧಿಸಿದೆ.
ಭಾರತೀಯರಿಗೆ ಕೋಟ್ಯಂತರ ದೇವರುಗಳಿರುವುದರಿಂದ ಗೊಂದಲವುಂಟಾಗಿದೆ. ಹಾಗಾಗಿ ಶ್ರೀ ಶ್ರೀ ಅನುಕೂಲಚಂದ್ರ ಅವರನ್ನು ‘ಪರಮಾತ್ಮ’ ಎಂದು ಘೋಷಿಸಿ, ಏಕದೈವ ಪೂಜೆಗೆ ಅವಕಾಶ ಮಾಡಿಕೊಡುವಂತೆ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸರ್ವೋಚ್ಛನ್ಯಾಯಾಲ ಅರ್ಜಿ ಸಲ್ಲಿಸಿದ ವಕೀಲರನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾ.ಎಂ.ಆರ್.ಶಾ ಹಾಗೂ ಸಿ.ಟಿ.ರವಿಕುಮಾರ್ ಅವರಿದ್ದ ಪೀಠ, ನಮ್ಮದು ಜ್ಯಾತ್ಯಾತೀತ ರಾಷ್ಟ್ರ. ಇಲ್ಲಿನ ಜನರಿಗೆ ಧರ್ಮ ಹಾಗೂ ದೇವರ ಆಯ್ಕೆಯಲ್ಲಿ ಸ್ವಾತಂತ್ರ್ಯವಿದೆ. ಇಂತದ್ದೇ ಆಧ್ಯಾತ್ಮ ಗುರುವನ್ನು ಪೂಜಿಸಿ ಎಂದು ಹೇಳಲು ಸಾಧ್ಯವಿಲ್ಲ. ಈ ರೀತಿ ಅರ್ಜಿಗಳ ಮೂಲಕ ಕೋರ್ಟ್ ಕಲಾಪವನ್ನು ವ್ಯರ್ಥ ಮಾಡುವುದೂ ಸರಿಯಲ್ಲ ಎಂದು ಕಿಡಿಕಾರಿದೆ.
ಅಲ್ಲದೇ ನಿಮ್ಮದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ. ಇದೊಂದು ಪ್ರಚಾರ ಹಿತಾಸಕ್ತಿಯ ಅರ್ಜಿ. ವಕೀಲರಾಗಿ ಇಂತಹ ಅರ್ಜಿಯನ್ನು ಸಲ್ಲಿಸಿದ್ದಕ್ಕೆ ಹಾಗೂ ಕೋರ್ಟ್ ಸಮಯ ವ್ಯರ್ಥ ಮಾಡಿರುವ ಕ್ರಮಕ್ಕೆ ಆಕ್ರೋಶ ವ್ಯಜ್ತಪಡಿಸಿದ ನ್ಯಾಯಪೀಠ 1 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಆದೇಶ ನೀಡಿದೆ.