ಬೆಂಗಳೂರು: ತಿರುಪತಿ ತಿರುಮಲ ಬೆಟ್ಟದಲ್ಲಿ ರಾಜ್ಯದ ಭಕ್ತರಿಗೆ 346 ಹೊಸ ಸುಸಜ್ಜಿತ ಕೊಠಡಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ರಾಜ್ಯ ಸರ್ಕಾರ 236 ಕೋಟಿ ರೂಪಾಯಿ ವೆಚ್ಚದಲ್ಲಿ ತಿರುಮಲದಲ್ಲಿ ವಸತಿ ಸಂಕೀರ್ಣ ನಿರ್ಮಿಸುತ್ತಿದ್ದು, ಕಾಮಗಾರಿ ವೀಕ್ಷಿಸಿದ ಬಿಡಿಎ ಅಧ್ಯಕ್ಷ ಮತ್ತು ಟಿಟಿಡಿ ಸದಸ್ಯ ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ.
ಮೊದಲ ಹಂತದ ಕಾಮಗಾರಿ ಐದಾರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ವಿವಿಐಪಿ, ವಿಐಪಿ ಮತ್ತು ಸಾಮಾನ್ಯ ವರ್ಗ ಹೀಗೆ ಮೂರು ವಸತಿ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಕಲ್ಯಾಣ ಮಂಟಪ ಕೂಡ ನಿರ್ಮಾಣವಾಗುತ್ತಿದೆ. ಟಿಟಿಡಿಯಿಂದ ಟೆಂಡರ್ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ಭವನದ ಹಳೆಯ ಕಲ್ಲಿನ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು ನವೀಕರಣ ಮಾಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ತಿರುಮಲಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಹೀಗಾಗಿ ಮುಂದಿನ ಫೆಬ್ರವರಿ ವೇಳೆಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಉದ್ದೇಶವಿದೆ ಎಂದು ವಿಶ್ವನಾಥ್ ಹೇಳಿದ್ದಾರೆ.
ತಿರುಮಲ ಬೆಟ್ಟದ ಕೆಳಗೆ ರಾಜ್ಯ ಸರ್ಕಾರದ ಆಸ್ತಿ ಇದ್ದು, ಅದನ್ನು ಕೂಡ ಅಭಿವೃದ್ಧಿಪಡಿಸಿ ಅದರಿಂದ ಬರುವ ಆದಾಯವನ್ನು ತಿರುಮಲದಲ್ಲಿರುವ ಕರ್ನಾಟಕ ಭವನ ನಿರ್ವಹಣೆಗೆ ಬಳಕೆ ಮಾಡುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು.