ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ ಆರೋಪದ ಮೇಲೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಡಿ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಲಾಗಿದೆ.
ತುಮಕೂರು ತಾಲೂಕಿನ ಹೆಗ್ಗೆರೆಯಲ್ಲಿ ಮಾರ್ಚ್ 25 ರಂದು ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಗುಬ್ಬಿ ಶ್ರೀನಿವಾಸ್ ಅವರು, ವಿ. ಸೋಮಣ್ಣ ಬೆಂಗಳೂರಿನ ಕೊಚ್ಚೆ ನೀರು. ತುಮಕೂರಿನ ಜನ ಸ್ವಾಭಿಮಾನಿಗಳು, ಪ್ರಜ್ಞಾವಂತರು. ಚುನಾವಣೆಯಲ್ಲಿ ಸೋಮಣ್ಣ ಅವರನ್ನು ಗೆಲ್ಲಿಸಬೇಡಿ ಎಂದು ಹೇಳಿದ್ದಾರೆ.
ಸಭೆಯಲ್ಲಿ ಹಾಜರಿದ್ದ ಚುನಾವಣಾ ಎಫ್.ಎಸ್.ಟಿ. ತಂಡದ ಕೆ. ಶಿವಪ್ಪ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಲು ಜೆ.ಎಂ.ಎಸ್.ಸಿ. ಕೋರ್ಟ್ ಗೆ ಅನುಮತಿ ಕೋರಿದ್ದು, ಕೋರ್ಟ್ ಆದೇಶದ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.