ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಮೂಲಕ ‘ಸ್ಪೂರ್ತಿ ಯೋಜನೆ’ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ಪೂರ್ತಿ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಹೆಣ್ಣು ಮಕ್ಕಳಿಗೆ ಕೌಶಲ ಆಧಾರಿತ ಶಿಕ್ಷಣ, ಬಾಲ್ಯ ವಿವಾಹ ತಡೆ, ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಜಾಗೃತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಮೂಲಕ ಸ್ಪೂರ್ತಿ ಯೋಜನೆ ಅನುಷ್ಠಾನಗೊಳಿಸಲಾಗುವುದು. 12.51 ಕೋಟಿ ರೂಪಾಯಿ ವೆಚ್ಚದ ಸ್ಪೂರ್ತಿ ಯೋಜನೆಯನ್ನು ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಕಲಬುರ್ಗಿ, ರಾಯಚೂರು, ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ 11 ತಾಲೂಕುಗಳಲ್ಲಿ ಜಾರಿ ಮಾಡಲು ತೀರ್ಮಾನಿಸಲಾಗಿದೆ.