ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಮಹಿಳೆಯನ್ನು ಅಪ್ಪಿಕೊಂಡ ಪ್ರೇಮಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರೂ ಗಂಭೀರ ಸ್ಥಿತಿಯಲ್ಲಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ ನ ಪಿ.ಹೆಚ್.ಡಿ. ವಿದ್ಯಾರ್ಥಿ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ಮಹಿಳೆಯನ್ನು ಸುಟ್ಟುಹಾಕುವ ಉದ್ದೇಶದಿಂದ ಬೆಂಕಿ ಹಚ್ಚಿಕೊಂಡು ನಂತರ ಆಲಿಂಗಿಸಿಕೊಂಡಿದ್ದಾನೆ.
ಇಬ್ಬರಿಗೂ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರೂ ಪ್ರಾಣಿಶಾಸ್ತ್ರದಲ್ಲಿ ಪಿ.ಹೆಚ್.ಡಿ. ವಿದ್ಯಾರ್ಥಿಗಳು. ಡಾ ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ.
ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಬೇಗಂಪುರ ಠಾಣೆ ಪಿಐ ಪ್ರಶಾಂತ ಪೋತದಾರ ತಿಳಿಸಿದ್ದಾರೆ. ಹನುಮಾನ್ ತೆಕಡಿಯಲ್ಲಿರುವ ಸರ್ಕಾರಿ ಫೊರೆನ್ಸಿಕ್ ಕಾಲೇಜಿನ ಬಯೋಫಿಸಿಕ್ಸ್ ವಿಭಾಗದ ಕ್ಯಾಬಿನ್ ನಲ್ಲಿ ಮಹಿಳೆ ತನ್ನ ಪ್ರಾಜೆಕ್ಟ್ ಮಾಡುತ್ತಿದ್ದಾಗ ಆರೋಪಿ ಒಳಗೆ ನುಗ್ಗಿದ್ದಾನೆ.
ತನ್ನ ಮದುವೆಯ ಪ್ರಸ್ತಾಪವನ್ನು ಏಕೆ ತಿರಸ್ಕರಿಸಿದೆ ಎಂದು ಪ್ರಶ್ನಿಸುತ್ತಾ ತನ್ನ ಮೇಲೆ ಹಾಗೂ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಲೈಟರ್ ಬಳಸಿ ಬೆಂಕಿ ಹಚ್ಚಿಕೊಂಡಿದ್ದಾನೆ. ನಂತರ ಆ ವ್ಯಕ್ತಿ ಮಹಿಳೆಯನ್ನು ತಬ್ಬಿಕೊಂಡಿದ್ದಾನೆ.
ಇಬ್ಬರನ್ನು ಚಿಕಿತ್ಸೆಗಾಗಿ ಔರಂಗಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪುರುಷನಿಗೆ 90% ಸುಟ್ಟ ಗಾಯಗಳಾಗಿದ್ದರೆ, 55% ಸುಟ್ಟ ಗಾಯಗಳೊಂದಿಗೆ ಮಹಿಳೆಯೂ ಗಂಭೀರ ಸ್ಥಿತಿಯಲ್ಲಿದ್ದಾರೆ.
ಮಹಿಳೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.