ನವದೆಹಲಿ: ಲೋಕಸಭೆ ಉಪ ಸಭಾಧ್ಯಕ್ಷರ ಆಯ್ಕೆ ಆಯ್ಕೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ವಿನೂತನ ತಂತ್ರದ ಮೊರೆ ಹೋಗಿದೆ. ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಅವರನ್ನು ಕಣಕ್ಕಿಳಿಸುವ ಮೂಲಕ ಪ್ರಬಲ ಅಸ್ತ್ರ ಪ್ರಯೋಗಿಸಲು ತಂತ್ರಗಾರಿಕೆ ನಡೆಸಿದೆ.
ದಲಿತ ಸಂಸದನ ಕಣಕ್ಕಿಳಿಸಲು ಇಂಡಿಯಾ ಮೈತ್ರಿಕೂಟ ತಂತ್ರಗಾರಿಕೆ ರೂಪಿಸಿದೆ. ಉತ್ತರ ಪ್ರದೇಶದ ಫೈಜಾಬಾದ್ ಕ್ಷೇತ್ರವನ್ನು ಅವದೇಶ್ ಪ್ರಸಾದ್ ಪ್ರತಿನಿಧಿಸುತ್ತಿದ್ದು, ಈ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಅಯೋಧ್ಯೆ ಇದೆ. ರಾಮ ಮಂದಿರ ನಿರ್ಮಾಣ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡುವೆಯೂ ಬಿಜೆಪಿ ಅಭ್ಯರ್ಥಿ ಲಲ್ಲೂ ಸಿಂಗ್ ಅವರನ್ನು ಅವಧೇಶ್ ಪ್ರಸಾದ್ 54ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದರು.
ಎನ್.ಡಿ.ಎ. ಮೈತ್ರಿಕೂಟ ಉಪ ಸಭಾಧ್ಯಕ್ಷರ ಸ್ಥಾನವನ್ನು ತಮ್ಮವರಿಗೆ ನೀಡಲು ಬಯಸಿದೆ. ಇಂಡಿಯಾ ಮೈತ್ರಿಕೂಟಕ್ಕೆ ಬಿಟ್ಟು ಕೊಡುವ ಸಾಧ್ಯತೆಯಿಲ್ಲ. ಹೀಗಾಗಿ ದಲಿತ ಸಮುದಾಯಕ್ಕೆ ಸೇರಿ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದಿರುವ ಅವಧೇಶ್ ಪ್ರಸಾದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಬಲವಾದ ಸಂದೇಶ ನೀಡಲು ಇಂಡಿಯಾ ಮೈತ್ರಿಕೂಟ ಮುಂದಾಗಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಕುರಿತಾಗಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಇಂಡಿಯಾ ಕೂಟದಲ್ಲಿ 236 ಸಂಸದರಿದ್ದಾರೆ. ಎನ್.ಡಿ.ಎ. ಮೈತ್ರಿಕೂಟದಲ್ಲಿ 293 ಸಂಸದರಿದ್ದಾರೆ. ಯಾವ ಮೈತ್ರಿಕೂಟದಲ್ಲಿಯೂ ಇಲ್ಲದ ಆರು ಪಕ್ಷಗಳಿಗೆ ಸೇರಿದ 9 ಸಂಸದರಿದ್ದಾರೆ.