ಕೋಟಾ: ಜೆಇಇ ಪರೀಕ್ಷೆ ಸಿದ್ಧತೆ ಸೇರಿದಂತೆ ಹಲವು ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಗಳು ರಾಜಸ್ಥಾನದ ಕೋಟಾದ ಪಿಜಿ ಹಾಗೂ ಹಾಸ್ಟೇಲ್ ನಲ್ಲಿ ನೇಣಿಗೆ ಕೊರಳೊಡ್ಡಿ ಸಾವನ್ನಪ್ಪುತ್ತಿರುವ ಸಾಲು ಸಾಲು ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಎಚ್ಚೆತ್ತ ಆಡಳಿತ ಮಂಡಳಿ, ಅಲ್ಲಿನ ಹಾಸ್ಟೇಲ್ ರೂಮ್ ಗಳಲ್ಲಿ ಸ್ಪ್ರಿಂಗ್ ಫ್ಯಾನ್ ಅಳವಡಿಸಿದೆ.
ಪರೀಕ್ಷಾ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಪಿಜಿ, ಹಾಸ್ಟೇಲ್ ನಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದರು. ರಾಜಸ್ಥಾನದ ಕೋಟಾ ತರಬೇತಿ ಕೇಂದ್ರದಲ್ಲಿ ಈ ವರ್ಷ ಬರೋಬ್ಬರಿ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೇ ಕೋಟಾ ತರಬೇತಿ ಕೇಂದ್ರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ಬೆನ್ನಲ್ಲೇ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪಿಜಿ, ಹಾಸ್ಟೇಲ್ ಗಳಲ್ಲಿ ಸ್ಪ್ರಿಂಗ್ ಫ್ಯಾನ್ ಅಳವಡಿಸಲಾಗಿದೆ.
ಸ್ಪ್ರಿಂಗ್ ಇರುವ ಫ್ಯಾನ್ ಗಳನ್ನು ಅಳವಡಿಕೆಯಿಂದ ವಿದ್ಯಾರ್ಥಿಗಳು ನೇಣಿಗೆ ಕೊರಳೊಡ್ಡುವುದನ್ನು ತಡೆಯಬಹುದು. ಸ್ಪ್ರಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡರೂ ಭಾರ ಬಿದ್ದಾಕ್ಷಣ ಫ್ಯಾನ್ ಕೆಳಗೆ ಬೀಳುತ್ತದೆ ಹಾಗೂ ವಿದ್ಯಾರ್ಥಿಗಳಿಗಾಗಲಿ, ನೇಣು ಬಿಗಿದುಕೊಳ್ಳುವ ವ್ಯಕ್ತಿಗಾಗಲಿ ಯಾವುದೇ ಪ್ರಾಣಾಪಾಯವಾಗುವುದಿಲ್ಲ.