ಜೈಪುರ: ಸ್ಪೈಸ್ ಜೆಟ್ ಮಹಿಳಾ ಸಿಬ್ಬಂದಿಯೊಬ್ಬರು ವಿಮಾನ ನಿಲ್ದಾಣದಲ್ಲಿ ಸಿಐಎಸ್ ಎಫ್ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಜೈಪುರ ಏರ್ ಪೋರ್ಟ್ ನಲ್ಲಿ ನಡೆದಿದೆ.
ಸ್ಪೈಸ್ ಜೆಟ್ ಆಹಾರ ಮೇಲ್ವಿಚಾರಕಿ ಅನುರಾಧಾ ರಾಣಿ ಅವರನ್ನು ಜೈಪುರ ವಿಮಾನ ನಿಲ್ದಾಣದ ಗೇಟ್ ನಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಗಿರಿರಾಜ್ ಪ್ರಸಾದ್ ಮುಂಜಾನೆ 4 ಗಂಟೆ ವೇಳೆ ತಡೆದಿದ್ದಾರೆ. ಗೇಟ್ ಬಳಸಲು ಅನುಮತಿ ನೀಡಿಲ್ಲ. ಮತ್ತೊಂದು ಗೇಟ್ ಮೂಲಕ ಹೊರಹೋಗುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಅನುರಾಧಾ, ಸಿಐಎಸ್ ಎಫ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅನುರಾಧಾ ರಾಣಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸಿಐಎಸ್ ಎಫ್ ಅಧಿಕಾರಿ ತನ್ನ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿಮಾನಯಾನ ಸಂಸ್ಥೆ ದೂರು ನೀಡಿದೆ. ಏರ್ ಪೋರ್ಟ್ ನಲ್ಲಿ ಸ್ಕ್ರೀನಿಂಗ್ ಪ್ರದೇಶ ಸುತ್ತಲೂ ಮಹಿಳಾ ಪೊಲೀಸ್ ಇರಲಿಲ್ಲ. ಈ ವೇಳೆ ಮಹಿಳಾ ಸಿಬ್ಬಂದಿಯನ್ನು ಸ್ಕ್ರೀನಿಂಗ್ ಗೆ ಬರುವಂತೆ ಗಿರಿರಾಜ್ ಕರೆದಿದ್ದಾರೆ. ಈ ವೇಳೆ ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿ ನಡುವೆ ವಾಗ್ವಾದ ಶುರುವಾಗಿದೆ ಎನ್ನಲಾಗಿದೆ.
ಈ ಬಗ್ಗೆ ಸ್ಪೈಸ್ ಜೆಟ್ ಪ್ರತಿಕ್ರಿಯಿಸಿದ್ದು, ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಕೆಲಸ ಮುಗಿದ ಬಳಿಕ ಮನೆಗೆ ಬರುವಂತೆ ಅಧಿಕಾರಿ ಕರೆದಿದ್ದು, ಇದರಿಂದ ಕೋಪಗೊಂಡು ಮಹಿಳಾ ಸಿಬ್ಬಂದಿ ಕಪಾಳಕ್ಕೆ ಬಾರಿಸಿದ್ದಾಗಿ ತಿಳಿಸಿದೆ.