ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ದೆಹಲಿಯಿಂದ ಬೆಂಗಳೂರಿಗೆ ಬರಬೇಕಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಕರು 12 ಗಂಟೆಗೂ ಹೆಚ್ಚು ಕಾಲ ಲಾಕ್ ಆಗಿ ಪರದಾಡಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದಿಗ ಮತ್ತೆ ಸ್ಪೈಸ್ ಜೆಟ್ ಏರ್ ಲೈನ್ಸ್ ನಿಂದ ಎಡವಟ್ಟಾಗಿದ್ದು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ ಕೋಲ್ಕತ್ತಾಗೆ ಹೊರಡಬೇಕಿದ್ದ ಸ್ಪೈಸ್ ಜೆಟ್ ವಿಮಾನ ವಿಳಂಬವಾಗಿದ್ದು ಸಂಜೆಯಾದರೂ ಟೇಕಾಫ್ ಆಗಿಲ್ಲ. ಟರ್ಮಿನಲ್ 1ರಲ್ಲೇ ಕಾದು ಕುಳಿತಿರುವ ಪ್ರಯಾಣಿಕರು ಏರ್ ಲೈನ್ಸ್ ವಿರುದ್ಧ ಪ್ರತಿಭಟಿಸಿದ್ದಾರೆ.
ಸ್ಪೈಸ್ ಜೆಟ್ ನ SG 8531 ಸಂಖ್ಯೆಯ ವಿಮಾನ ವಿಳಂಬವಾಗಿದೆ. ಬೆಳಿಗ್ಗೆ 10:50ಕ್ಕೆ ಬೆಂಗಳೂರಿನಿಂದ ಕೋಲ್ಕತ್ತಾಗೆ ವಿಮಾನ ಹಾರಾಟ ನಡೆಸಬೇಕಿತ್ತು. ಆದರೆ ಸಂಜೆಯಾದರು ವಿಮಾನ ಟೇಕಾಫ್ ಆಗಿಲ್ಲ. ಏರ್ ಲೈನ್ಸ್ ಸಿಬ್ಬಂದಿಗಳು ವಿಮಾನ ವಿಳಂಬಕ್ಕೆ ಸೂಕ್ತ ಕಾರಣವನ್ನೂ ತಿಳಿಸುತ್ತಿಲ್ಲ. ಏರ್ ಪೋರ್ಟ್ ನ ಟರ್ಮಿನಲ್ಲಿ ಕಾದು ಕಾದು ಸುಸ್ತಾದ ಪ್ರಯಾಣಿಕರು ಸ್ಪೈಸ್ ಜೆಟ್ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರು ಪ್ರತಿಭಟಿಸುತ್ತಿದ್ದಂತೆ ಸ್ಪೈಸ್ ಜೆಟ್ ಸಿಬ್ಬಂದಿಗಳು ವಿಮಾನ ಸಂಜೆ 7 ಗಂಟೆಗೆ ಟೇಕಾಫ್ ಆಗಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಿಂದ ಕೋಲ್ಕತ್ತಾಗೆ ತೆರಳಿ, ಅಲ್ಲಿಂದ ಬೇರೆ ನಗರ, ವಿದೇಶಗಳಿಗೂ ಹೊರಡಲು ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ತಮಗೆ ಕೋಲ್ಕತ್ತಾದಿಂದಲೂ ಬೇರೆಡೆ ತೆರಳುವ ಫ್ಲೈಟ್ ಮಿಸ್ ಆಗುತ್ತಿರುವುದಾಗಿ ಕಿಡಿಕಾರಿದ್ದಾರೆ.