ಬೆಂಗಳೂರು: ಸ್ಪೈಸ್ ಜೆಟ್ ಏರ್ ಲೈನ್ಸ್ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ಪ್ರಯಾಣಿಕರು 12ಗಂಟೆಗಳ ಕಾಲ ವಿಮಾನದೊಳಗೇ ಲಾಕ್ ಆಗಿ ಪರದಾಡಿದ ಘಟನೆ ನಡೆದಿದೆ.
ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ SG 8151 ನ ಸ್ಪೈಸ್ ಜೆಟ್ ಏರ್ ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. 60 ಪ್ರಯಾಣಿಕರು ವಿಮಾನ ಹತ್ತಿದ್ದರು. ಈ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷದಿಂದಾಗಿ ಪ್ರಯಾಣಿಕರು ವಿಮಾನದಲ್ಲೇ ಲಾಕ್ ಆಗಿದ್ದಾರೆ. ವಿಮಾನ ದೆಹಲಿ ಏರ್ ಪೋರ್ಟ್ ನಲ್ಲಿಯೇ ನಿಂತಿದೆ.
ನಿನ್ನೆ ಸಂಜೆಯಿಂದ ಇಂದು ಬೆಳಗಿನವರೆಗೂ ವಿಮಾನದೊಳಗೇ ಪ್ರಯಾಣಿಕರು ಲಾಕ್ ಆಗಿದ್ದಾರೆ. ಊಟ, ತಿಂಡಿ ವ್ಯವಸ್ಥೆಯನ್ನೂ ಎರ್ ಲೈನ್ಸ್ ಸಿಬ್ಬಂದಿ ಮಾಡಿಲ್ಲ. ಇದರಿಂದ ಪ್ರಯಾಣಿಕರು ವಿಮಾನದೊಳಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾನದಿಂದ ಹೊರಗಿಳಿಯಲೂ ಆಗದೇ ಒಳಗೇ ಕುಳಿತುಕೊಳ್ಳಲೂ ಆಗದೇ ಪರದಾಡಿದ್ದು, ಸ್ಪೈಸ್ ಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಪೈಸ್ ಜೆಟ್ ವಿಮಾನ ನಿನ್ನೆ ಸಂಜೆ 7:40ಕ್ಕೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರಿಂದ ಬೆಂಗಳೂರಿಗೆ ಟೆಕ್ ಆಫ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಟೇಕ್ ಆಫ್ ಆಗಿಲ್ಲ. ಇಂದು ಬೆಳಿಗ್ಗೆ 7 ಗಂಟೆವರೆಗೂ ಪ್ರಯಾಣಿಕರು ವಿಮಾನದೊಳಗೇ ಲಾಕ್ ಆಗಿದ್ದಾರೆ. ವಿಮಾನದೊಳಗಿದ್ದ ಪ್ರಯಾಣಿಕರಿಗೆ ಸೂಕ್ತ ಮಾಹಿತಿ ನೀಡದ ಕಾರಣ ವಿಮಾನ ಹೈಜಾಕ್ ಮಾಡಿದ್ದಾರಾ ಎಂದು ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ಅಲ್ಲದೇ ಪ್ರಯಾಣಿಕರ ಬೋರ್ಡಿಂಗ್ ಪಾಸ್ ಬದಲಾಯಿಸಿ ಫ್ಲೈಟ್ ನಲ್ಲಿ ಕೂರಿಸಿದ್ದಾರೆ. ಏನಾಗುತ್ತಿದೇ ಎಂದೇ ಗೊತ್ತಾಗುತ್ತಿಲ್ಲ. ಚಿಕ್ಕ ಮಕ್ಕಳು, ವೃದ್ಧರು, ಮಹಿಳೆಯರು ಇದ್ದಾರೆ. ಸಿಬ್ಬಂದಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೈಸ್ ಜೆಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.