ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬಾದ್ಲಾಪುರದಲ್ಲಿ ಸೋಮವಾರ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ 59 ವರ್ಷದ ಮಹಿಳೆಯೊಬ್ಬರಿಗೆ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.
ಮೃತರನ್ನು ಖಾರ್ವಾಯಿ ನಿವಾಸಿ ಮಥುರಾ ರಾಮಾ ಇರ್ಲೆ ಎಂದು ಗುರುತಿಸಲಾಗಿದೆ.
ಬಾದ್ಲಾಪುರದ ಖಾರ್ವಾಯಿ ಪ್ರದೇಶದ ಪನ್ವೇಲ್ಕರ್ ಭೂಮಿ ಕಾಂಪ್ಲೆಕ್ಸ್ ಬಳಿ ಬೆಳಿಗ್ಗೆ 4.17 ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಈ ಭೀಕರ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಾರಿನ ವೇಗ ಎಷ್ಟಿತ್ತೆಂದರೆ ಡಿಕ್ಕಿಯ ರಭಸಕ್ಕೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾರು ಅತಿ ವೇಗದಲ್ಲಿ ಚಲಿಸುತ್ತಾ ಪಾದಚಾರಿಗೆ ಡಿಕ್ಕಿ ಹೊಡೆಯುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಅಪಘಾತದ ನಂತರ ಸಮೀಪದ ಪೆಟ್ರೋಲ್ ಪಂಪ್‌ನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ಪರೀಕ್ಷಿಸಿದರು ಆದರೆ ಅವರು ಅಷ್ಟರಲ್ಲಿಯೇ ಸಾವನ್ನಪ್ಪಿದ್ದರು.
ಮಾಹಿತಿ ಪಡೆದ ಬಾದ್ಲಾಪುರ ಪೊಲೀಸರು ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಚಾಲಕ ಮದ್ಯದ ಅಮಲಿನಲ್ಲಿ ಇದ್ದನೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.