ರಾಜ್‌ಕೋಟ್: ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಹಾರಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 7 ಮಂದಿ ಸಾವನ್ನಪ್ಪಿರುವ ಘಟನೆ ಜುನಾಗಢ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಜುನಾಗಢ-ವೆರಾವಲ್ ಹೆದ್ದಾರಿಯ ಭಂಡೂರಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ನಾಲ್ವರು ಪ್ರಯಾಣಿಕರಿದ್ದ ಐದು ಆಸನಗಳ ಸೆಡಾನ್ ನ ಚಾಲಕ ಅತಿವೇಗದಲ್ಲಿ ಸ್ಟೀರಿಂಗ್ ನ ನಿಯಂತ್ರಣವನ್ನು ಕಳೆದುಕೊಂಡು ಡಿವೈಡರ್ ಕಡೆಗೆ ತಿರುಗಿದೆ. ನಂತರ ಎದುರಿನಿಂದ ಬರುತ್ತಿದ್ದ ಹ್ಯಾಚ್ ಬ್ಯಾಕ್ ಗೆ ಡಿಕ್ಕಿ ಹೊಡೆದಿದೆ.
ಮೃತಪಟ್ಟವರನ್ನು ಜುನಾಗಢ್‌ನ ಬಿಲ್ಖಾ ರಸ್ತೆಯ ನಿವಾಸಿ ಚಾಲಕ ವಜು ರಾಥೋಡ್(60), ಕೆಶೋಡ್ ತಾಲೂಕಿನ ಮಣೆಕವಾಡ ಗ್ರಾಮದ ನಕುಲ್ ಕುವಾಡಿಯಾ(25); ಜುನಾಗಢದ ತಲವ್ ದರ್ವಾಜಾದಲ್ಲಿ ವಾಸವಾಗಿದ್ದ ಧರಮ್ ಧರದೇವ್(20) ಮತ್ತು 19 ವರ್ಷ ವಯಸ್ಸಿನ ಅಕ್ಷತ್ ದವೆ ಮತ್ತು ಓಂ ಮುಂಗ್ರಾ ಎಂದು ಗುರುತಿಸಲಾಗಿದೆ; ಇಬ್ಬರೂ ಜುನಾಗಢದಿಂದ ರಾಜ್‌ಕೋಟ್ ಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಕುಲ್ ಮತ್ತು ಧರಮ್ ತಮ್ಮ ಕಾಲೇಜು ಪರೀಕ್ಷೆ ಬರೆಯಲು ಗಡುಗೆ ಹೋಗುತ್ತಿದ್ದರು. ಅಕ್ಷತ್ ಮತ್ತು ಓಂ ಕರಾವಳಿ ಪಟ್ಟಣವಾದ ಚೋರ್ವಾಡ್‌ನಲ್ಲಿ ರಜಾ ಶಿಬಿರಕ್ಕೆ ಹೋಗುತ್ತಿದ್ದರು ಎಂದು ಪೊಲೀಸ್ ಉಪಾಧೀಕ್ಷಕ(ಡಿಎಸ್‌ಪಿ) ದಿನೇಶ್ ಕೊಡಿಯಾಟರ್ ಹೇಳಿದ್ದಾರೆ.
ಇನ್ನೊಂದು ಕಾರ್ ನಲ್ಲಿದ್ದ ಪ್ರಯಾಣಿಕರನ್ನು ರಾಜು ಖುತಾನ್(40) ಮತ್ತು ವಿನು ವಾಲಾ(35) ಎಂದು ಗುರುತಿಸಲಾಗಿದೆ.
ಅತಿವೇಗದಲ್ಲಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಹಾರಿದೆ. ನಂತರ ಅದು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರ್ ಗೆ ಡಿಕ್ಕಿ ಹೊಡೆದಿದೆ. ಎರಡೂ ಕಾರುಗಳಲ್ಲಿದ್ದ ಎಲ್ಲಾ ಏಳು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಕೊಡಿಯಾಟರ್ ಹೇಳಿದರು.
ಅಪಘಾತ ಸ್ಥಳದ ಬಳಿ ಅಳವಡಿಸಲಾಗಿರುವ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ ಎಂದು ತನಿಖಾಧಿಕಾರಿ ಸಲ್ಮಾ ಸುಮ್ರಾ ತಿಳಿಸಿದ್ದಾರೆ. ಮಲಿಯಾ ಹಟಿನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.