ಸಮುದ್ರದಾಳದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡ ಬೆನ್ನಲ್ಲೇ ಎದ್ದ ತ್ಸುನಾಮಿಯಿಂದಾಗಿ ಸಮುದ್ರದ ಪಾಲಾಗಿದ್ದ 57 ವರ್ಷ ವಯಸ್ಸಿನ ಟೋಂಗನ್ ವ್ಯಕ್ತಿಯೊಬ್ಬರು 27 ಗಂಟೆಗಳ ಕಾಲ ಈಜಿಕೊಂಡು ಬದುಕಿ ಬಂದಿದ್ದಾರೆ.
ಲಿಸಾಲಾ ಫೊಲಾವು ಹೆಸರಿನ ಈ ವ್ಯಕ್ತಿ ಅಟಾಟಾ ಎಂಬ ಪುಟ್ಟ ದ್ವೀಪವೊಂದರಲ್ಲಿ ವಾಸಿಸುತ್ತಿದ್ದರು. ಶನಿವಾರ ಸಂಜೆ 7 ಗಂಟೆಗೆ ಅಪ್ಪಳಿಸಿದ ದೈತ್ಯ ಅಲೆಗಳು ಅಟಾಟಾ ದ್ವೀಪವನ್ನು ಕೊಚ್ಚಿಕೊಂಡು ಹೋಗಿವೆ.
ತ್ಸುನಾಮಿ ಬಗ್ಗೆ ತನ್ನ ಸಹೋದರ ಅಲರ್ಟ್ ಮಾಡಿದಾಗ ತಾವು ಮನೆಯಲ್ಲಿ ಪೇಂಟಿಂಗ್ ಮಾಡುತ್ತಿದ್ದಿದ್ದಾಗಿ ತಿಳಿಸಿದ ಫೊಲಾವು, ಆ ತಕ್ಷಣವೇ ತಮ್ಮ ಮನೆಯ ಲೌಂಜ್ ಮೂಲಕ ಅಲೆಗಳು ಹಾದು ಹೋಗಿರುವುದಾಗಿ ತಿಳಿಸಿದ್ದಾರೆ. ಕೂಡಲೇ ಮರವೇರಿ ಬಚಾವಾದ ಫೊಲಾವು, ಅಲ್ಲಿಂದ ಕೆಳಗೆ ಇಳಿದ ಕೂಡಲೇ ನುಗ್ಗಿಬಂದ ಬೇರೊಂದು ಅಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಸರಿಯಾಗಿ ನಡೆಯಲು ಕಷ್ಟಪಡುವ ತಾವು, ”ನನ್ನ ಬಳಿ ಬರುತ್ತಿದ್ದ ದೊಡ್ಡ ಅಲೆಗಳಗಳ ನಡುವೆಯೂ ತೇಲಾಡುತ್ತಾ ಕಾಲ ಕಳೆದೆ,” ಎಂದು ಟೋಂಗನ್ ಮಾಧ್ಯಮ ಸಂಸ್ಥೆ ಬ್ರಾಡ್‌ಕಾಮ್ ಬ್ರಾಡ್‌ಕಾಸ್ಟಿಂಗ್‌ಗೆ ಕೊಟ್ಟ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಹೀಗೆ ತೇಲಾಡುತ್ತಲೇ 7.5 ಕಿಮೀ ದೂರ ಈಜಿ ಟೊಂಗಾಟಾಪು ಹೆಸರಿನ ಪ್ರಮುಖ ದ್ವೀಪ ಸೇರಿಕೊಂಡಿದ್ದಾಗಿ ಫೊಲಾವು ತಿಳಿಸಿದ್ದಾರೆ. 27 ಗಂಟೆಗಳ ಬಳಿಕ, ಭಾನುವಾರ ಬೆಳಿಗ್ಗೆ 10 ಗಂಟೆಯ ವೇಳೆಗೆ ಫೊಲಾವು ತೀರ ಸೇರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೊಲಾವುರ ಈ ಸಾಹಸಗಾಥೆ ವೈರಲ್ ಆಗಿದ್ದು, ಅವರನ್ನು ’ರಿಯಲ್ ಲೈಫ್ ಅಕ್ವಾಮ್ಯಾನ್’ ಎಂದು ನೆಟ್ಟಿಗರೊಬ್ಬರು ಶ್ಲಾಘಿಸಿದ್ದಾರೆ.
ಶನಿವಾರ ಸ್ಫೋಟಗೊಂಡ ಹುಂಗಾ ಟೊಂಗಾ-ಹುಂಗಾ ಹಾ’ಆಪಾಯ್ ಜ್ವಾಲಾಮುಖಿ ಮೂರು ಮಂದಿಯನ್ನು ಬಲಿ ಪಡೆದಿದೆ.