ಮುಂಬೈ: ರಿಲಯನ್ಸ್ ಜಿಯೋ ಗ್ರಾಹಕರು ಎಐ ಫೋನ್ ಕಾಲ್ ಸೇವೆಗಳ ಘೋಷಣೆ ಮಾಡಲಾಗಿದೆ. ಕರೆಗಳನ್ನು ರೆಕಾರ್ಡ್ ಮಾಡಬಹುದು, ಧ್ವನಿಯ ಲಿಪ್ಯಂತರವೂ ಸಾಧ್ಯವಾಗಲಿದೆ. ಫೋನ್ ಸಂಭಾಷಣೆಯನ್ನು ಭಾಷಾಂತರ ಮಾಡಬಹುದಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ರಿಲಯನ್ಸ್ ಜಿಯೋ ಗ್ರಾಹಕರಿಗೆ ವಿಶೇಷ ಕೊಡುಗೆ ಘೋಷಿಸಿದ್ದಾರೆ. ಇನ್ನು ಮುಂದೆ ಯಾರೊಂದಿಗಾದರೂ ಫೋನ್ ಸಂಭಾಷಣೆ ನಡೆಸುವಾಗ ಆ ಕರೆಯನ್ನು ರೆಕಾರ್ಡ್ ಮಾಡುವ, ಲಿಖಿತ ರೂಪದಲ್ಲಿ ಪಡೆಯುವ ಮತ್ತು ಸಂಭಾಷಣೆಯನ್ನು ಇನ್ನೊಂದು ಭಾಷೆಗೆ ಭಾಷಾಂತರಿಸುವ ಸೌಲಭ್ಯವನ್ನು ಕಲ್ಪಿಸಲಾಗುವುದು.
ಜಿಯೋ ಟಿವಿ ಓಎಸ್ ದೇಶೀಯ ಟಿವಿ ಆಪರೇಟಿಂಗ್ ಸಿಸ್ಟಮ್, ಟಿವಿ ಓಪನ್ ವೀಕ್ಷಣೆಗೆ ಇದು ನೆರವಾಗಲಿದೆ. ಜಿಯೋ ಹೋಮ್ ಮೂಲಕ ಮನೆಯಲ್ಲಿರುವ ಫ್ಯಾನ್, ಲೈಟ್, ಫ್ರಿಡ್ಜ್ ಗಳನ್ನು ಒಂದೇ ವ್ಯವಸ್ಥೆಯಡಿ ನಿಯಂತ್ರಿಸಬಹುದು.
ಜಿಯೋ ಎಐ ಕ್ಲೌಡ್ ಮೂಲಕ ಗ್ರಾಹಕರಿಗೆ 100 ಜಿಬಿ ಉಚಿತ ಸ್ಟೋರೇಜ್ ನೀಡುವುದಾಗಿ ಘೋಷಿಸಲಾಗಿದೆ. ದೀಪಾವಳಿ ವೇಳೆಗೆ ಈ ಉಚಿತ ಕೊಡುಗೆ ಆರಂಭಿಸಲಾಗುವುದು. ಫೋಟೋಗಳು, ವಿಡಿಯೋಗಳು, ಡೇಟಾ ಮತ್ತು ಡಿಜಿಟಲ್ ಕಂಟೆಂಟ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದಾಗಿದೆ.