ಕೊರೊನಾ ವೈರಸ್ ಸೋಂಕಿನ ಮಧ್ಯೆ, ಲಸಿಕೆ ಅಭಿಯಾನ ಭಾರತದಲ್ಲಿ ವೇಗವಾಗಿ ನಡೆಸಲಾಗುತ್ತಿದೆ. ಇದುವರೆಗೆ 64 ಕೋಟಿ 48 ಲಕ್ಷ ಡೋಸ್ಗಳನ್ನು ದೇಶಾದ್ಯಂತ ನೀಡಲಾಗಿದೆ. ಭಾರತದಲ್ಲಿ ಲಸಿಕೆ ಅಭಿಯಾನ ಚುರುಕು ಪಡೆದ ನಂತ್ರ ನೆರೆಯ ರಾಷ್ಟ್ರ ಶ್ರೀಲಂಕಾ ಲಸಿಕೆಯ ಎರಡೂ ಡೋಸ್ ಪಡೆದ ಭಾರತೀಯರ ಪ್ರವೇಶಕ್ಕೆ ಅನುಮತಿ ನೀಡಿದೆ. ಶ್ರೀಲಂಕಾ ಏರ್ಲೈನ್ಸ್ ಭಾರತೀಯ ಪ್ರಯಾಣಿಕರಿಗಾಗಿ ವಿಶೇಷ ಆಫರ್ ನೀಡಿದೆ.
ಶ್ರೀಲಂಕಾ ಏರ್ಲೈನ್ಸ್ ಭಾರತೀಯ ಪ್ರವಾಸಿಗರಿಗಾಗಿ ಒಂದು ಟಿಕೆಟ್ ಗೆ ಇನ್ನೊಂದು ಟಿಕೆಟ್ ಉಚಿತ ಯೋಜನೆ ಶುರು ಮಾಡಿದೆ. ಕೊಲಂಬೊದಿಂದ ಭಾರತಕ್ಕೆ ಮರಳಲು ಒಂದು ಟಿಕೆಟ್ನೊಂದಿಗೆ ಒಂದು ಟಿಕೆಟ್ ಉಚಿತವಾಗಿ ಸಿಗಲಿದೆ. ಲಸಿಕೆಯ ಎರಡೂ ಡೋಸ್ಗಳನ್ನು ಹೊಂದಿರುವ ಭಾರತೀಯ ನಾಗರಿಕರು ಈಗ ಶ್ರೀಲಂಕಾಕ್ಕೆ ಪ್ರವಾಸ ಬೆಳೆಸಬಹುದಾಗಿದೆ.
ಭಾರತೀಯ ಪ್ರವಾಸಿಗರಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಭಾರತದಿಂದ ಶ್ರೀಲಂಕಾಗೆ ಬರುವ ಪ್ರವಾಸಿಗರು ಕನಿಷ್ಠ 14 ದಿನಗಳ ಮೊದಲು ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡಿರಬೇಕು. ಶ್ರೀಲಂಕಾಗೆ ಹೋಗ್ತಿದ್ದಂತೆ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಿಸಲಾಗುವುದು. ಪರೀಕ್ಷಾ ವರದಿ ಪಾಸಿಟಿವ್ ಬಂದರೆ, ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ವರದಿ ನಕಾರಾತ್ಮಕವಾಗಿದ್ದರೆ ಶ್ರೀಲಂಕಾದಲ್ಲಿ ಸುತ್ತಾಡಲು ಅವಕಾಶ ನೀಡಲಾಗುವುದು. ಶ್ರೀಲಂಕಾಗೆ ಹೋಗುವ ಭಾರತೀಯ ನಾಗರಿಕರು ಅಲ್ಲಿ ಸಾಮಾಜಿಕ ಅಂತರ ಮತ್ತು ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.