ರಾಜ್ಯದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರ ಮೊಮ್ಮಗಳು ಡಾ. ಸೌಂದರ್ಯ ತಮ್ಮ 30ನೇ ವರ್ಷ ವಯಸ್ಸಿನಲ್ಲಿ ಅತ್ಯಂತ ಕಠಿಣ ನಿರ್ಧಾರವನ್ನು ಕೈಗೊಂಡು ತಮ್ಮ ಬದುಕನ್ನೇ ಅಂತ್ಯಗೊಳಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಸೌಂದರ್ಯ ಬಿಎಸ್ವೈ ಪುತ್ರಿ ಪದ್ಮಾವತಿಯವರ ಮಗಳು. ಪ್ರಭಾವಿ ಮನೆತನಕ್ಕೆ ಸೇರಿದ್ದ ಸೌಂದರ್ಯ ಕಳೆದ ವರ್ಷವಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಪ್ರಸವದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸೌಂದರ್ಯ ತಮ್ಮ ಜೀವನದ ಯುದ್ಧಕ್ಕೆ ತಾವೇ ಪೂರ್ಣ ವಿರಾಮ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹೆರಿಗೆಯ ನಂತರ ಕಾಣಿಸಿಕೊಳ್ಳುವ ಬಾಣಂತಿ ಸನ್ನಿ ಒಂದು ಗಂಭೀರವಾದ ಮಾನಸಿಕ ಆರೋಗ್ಯ ಸ್ಥಿತಿಯಾಗಿದೆ. ಇದು ಭಾರತದಲ್ಲಿ ಹಲವಾರು ಹೊಸ ತಾಯಂದಿರಲ್ಲಿ ಕಾಣಿಸಿಕೊಳ್ಳುತ್ತದೆ. ಚೊಚ್ಚಲ ಹೆರಿಗೆಯ ಬಳಿಕ ಮಹಿಳೆಯರಲ್ಲಿ ಖಿನ್ನತೆ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಇದು ಅತ್ಯಂತ ಅಪಾಯಕಾರಿ ಕೂಡ ಹೌದು. ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಹೋದಲ್ಲಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳನ್ನು ಬಾಣಂತಿಯರು ಕೈಗೊಳ್ಳುವ ಸಾಧ್ಯತೆ ಇರುತ್ತದೆ.
ಏನಿದು ಬಾಣಂತಿ ಸನ್ನಿ..?
ಬಾಣಂತಿ ಸನ್ನಿ ಎನ್ನುವುದು ಅತಿಯಾದ ದುಃಖ, ಉದಾಸೀನತೆ ಅಥವಾ ಒಂದು ರೀತಿಯ ಕಳವಳಕಾರಿ ಭಾವನೆಗಳನ್ನು ಹೊಂದುವ ಅಪಾಯಕಾರಿ ಮಾನಸಿಕ ಕಾಯಿಲೆಯಾಗಿದೆ. ಇದು ಬಾಣಂತಿ ನಿದ್ರೆ, ಆಹಾರ ಹಾಗೂ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಈ ಕಾಯಿಲೆಯು ತಾಯಿ ಹಾಗೂ ಮಗುವಿನ ಮೇಲೆ ಅಪಾಯವನ್ನುಂಟು ಮಾಡುತ್ತದೆ.
ಗರ್ಭಧಾರಣೆಯ ಸಂದರ್ಭದಲ್ಲಿ ಅಥವಾ ಹೆರಿಗೆಯಾದ ಕೆಲವು ಸಮಯಗಳ ಕಾಲ ಮಹಿಳೆಯ ದೇಹದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಮಹಿಳೆಯರಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳಾದ ಖಿನ್ನತೆ ಹಾಗೂ ಅತಿಯಾದ ಆತಂಕವನ್ನು ಉಂಟು ಮಾಡುತ್ತದೆ.
ಸಾಮಾನ್ಯವಾಗಿ ಅರ್ಧದಷ್ಟು ತಾಯಂದಿರು ಹೆರಿಗೆಯ ಬಳಿಕ ಬೇಬಿ ಬ್ಲೂಸ್ ಅನ್ನು ಅನುಭವಿಸುತ್ತಾರೆ. ಇದು ಒಂದು ರೀತಿಯಲ್ಲಿ ಯಾವುದೇ ಕಾರಣವಿಲ್ಲದೇ ಅಳುವುದು, ಕಿರಿಕಿರಿ, ಚಡಪಡಿಕೆಯಂತಹ ಲಕ್ಷಣಗಳನ್ನು ಹೊಂದಿರುತ್ತದೆ. ಇದು ಒಂದು ಇಲ್ಲವೇ ಎರಡು ವಾರಗಳ ಕಾಲ ಮಾತ್ರ ಇರುತ್ತದೆ.