ಸಾಹಸ ಚಿತ್ರಗಳನ್ನು ಇಷ್ಟಪಡುವವರಿಗೆ ಜಾಕಿ ಚಾನ್ ಫೇವರಿಟ್. ಕಳೆದ 5 ದಶಕಗಳ ವೃತ್ತಿಜೀವನದಲ್ಲಿ ಜಾಕಿ ಚಾನ್ ತನ್ನದೇ ಆದ ಸಾಹಸಗಳನ್ನು ಪ್ರದರ್ಶಿಸುತ್ತಿದ್ದಾರೆ. ಅಪಾಯಕಾರಿ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸುವಾಗ ಅನೇಕ ಬಾರಿ ಅವರಿಗೆ ಮೂಳೆಗಳೇ ಮುರಿದು ಹೋಗಿದ್ದವು. ಇವುಗಳ ಪೈಕಿ ಅತ್ಯಂತ ಡೇಂಜರಸ್ ಸ್ಟಂಟ್ ಹೊಂದಿರುವ ಸಿನೆಮಾ ಅಂದ್ರೆ 1986ರಲ್ಲಿ ಬಿಡುಗಡೆಯಾದ ʼಆರ್ಮರ್ ಆಫ್ ಗಾಡ್ʼ. ಈ ಸಿನೆಮಾ ಶೂಟಿಂಗ್ ವೇಳೆ ತಾನು ಸತ್ತೇ ಹೋಗುವಷ್ಟರ ಮಟ್ಟಿಗೆ ಗಾಯಗೊಂಡಿದ್ದೆ ಅಂತಾ ಖುದ್ದು ಜಾಕಿ ಚಾನ್ ಬಹಿರಂಗಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತ ಜಾಕಿ ಚಾನ್ ಆ ಕ್ಷಣವನ್ನು ನೆನೆಪಿಸಿಕೊಂಡಿದ್ದಾರೆ. ಬಿಯರ್ ಕುಡಿಯುವ ದೃಶ್ಯದ ಚಿತ್ರೀಕರಣದ ನಂತರ, ಆ ಅಪಾಯಕಾರಿ ಸ್ಟಂಟ್ ಶೂಟಿಂಗ್ ನಡೆದಿತ್ತು. ಹಾಗಾಗಿ ಆ ಸಂದರ್ಭದಲ್ಲಿ ಜಾಕಿ ಬಿಯರ್ ಕುಡಿದಿದ್ದರು. ನೊರೆ ನೊರೆ ಬಿಯರ್ ಕುಡಿದು ಮರದಿಂದ ಜಿಗಿಯುವ ದೃಶ್ಯ ಅದು. ಮೊದಲನೆಯ ಟೇಕ್ ಜಾಕಿ ಚಾನ್ ಗೆ ತೃಪ್ತಿ ತರಲಿಲ್ಲ. ಸ್ಪೀಡ್ ಕಡಿಮೆ ಇತ್ತು ಎಂದ ಜಾಕಿ ಮತ್ತೆ ಅದೇ ದೃಶ್ಯ ಮಾಡಲು ನಿರ್ಧರಿಸಿದ್ರು.
ಮತ್ತೆ ಬಿಯರ್ ಕುಡಿಯೋ ದೃಶ್ಯವೂ ಇದ್ದಿದ್ರಿಂದ ಸುಮಾರು ಒಂದು ಪೆಗ್ ಮದ್ಯ ಜಾಕಿಯ ದೇಹ ಸೇರಿತ್ತು. ನಂತರ ಮರದಿಂದ ಜಂಪ್ ಮಾಡುವ ದೃಶ್ಯ, ಈ ವೇಳೆ ಮರದ ಕೊಂಬೆ ಮುರಿದು ಜಾಕಿ ಚಾನ್ ಕೆಳಕ್ಕೆ ಬಿದ್ದಿದ್ದಾರೆ. ಬೆನ್ನಿಗೆ ಪೆಟ್ಟಾಗಿದೆ ಎಂದು ಅವರಿಗೆ ಅನಿಸಿತ್ತು. ಆದ್ರೆ ಮೇಲಿಂದ ಬಿದ್ಧ ರಭಸಕ್ಕೆ ಜಾಕಿ ತೀವ್ರವಾಗಿ ಗಾಯಗೊಂಡಿದ್ದರು. ರಕ್ತ ಸುರಿಯುತ್ತಿತ್ತು, ಇಡೀ ದೇಹ ಚಲನೆಯೇ ಇಲ್ಲದಂತಾಗಿಬಿಟ್ಟಿತ್ತು.
ಎಲ್ಲರೂ ಸೇರಿ ಅವರನ್ನು ಆಸ್ಪತ್ರೆಗೆ ಹೊತ್ತೊಯ್ದಿದ್ದಾರೆ. ದೇಹ ಪೂರ್ತಿ ಮರಗಟ್ಟಿದ್ದರಿಂದ ನಾನು ಬಹುತೇಕ ಸತ್ತೇ ಹೋಗಿದ್ದೆ ಅಂತಾ ಜಾಕಿ ಚಾನ್ ಹೇಳಿದ್ದಾರೆ.
ಜಾಕಿ ಚಾನ್ ಸ್ಥಿತಿಯನ್ನು ನೋಡಿ ವೈದ್ಯರಿಗೂ ಗಾಬರಿ. ಬಿದ್ದ ರಭಸಕ್ಕೆ ಅವರ ತಲೆ ಬುರುಡೆ ಬಿರುಕು ಬಿಟ್ಟಿತ್ತು, ಮೂಳೆ ತಲೆಗೆ ನುಗ್ಗಿತ್ತು. ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ದರಿಂದ ಜಾಕಿ ಚಾನ್ ಚೇತರಿಸಿಕೊಂಡ್ರು. ಸತ್ತು ಬದುಕಿ ಬಂದ ಅನುಭವ ಅವರಿಗಾಗಿತ್ತು.